ಉಳ್ಳಾಲ: ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ವತಿಯಿಂದ ಅಂಗನವಾಡಿಗೆ ಕುರ್ಚಿ ವಿತರಣೆ
ಉಳ್ಳಾಲ: ಅಂಗನವಾಡಿ ಕೇಂದ್ರಗಳಿಗೆ ಕುರ್ಚಿ ಇನ್ನಿತರ ಸೌಕರ್ಯ ಗಳನ್ನು ವಿತರಿಸುವ ಕಾರ್ಯಕ್ರಮ ಇಲಾಖೆ ನಡೆಸಬೇಕಾಗಿತ್ತು. ಆದರೆ ಇದನ್ನು ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಮಕ್ಕಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕುರ್ಚಿ ವಿತರಣೆ ಮಾಡುವ ಮೂಲಕ ಬಹಳಷ್ಟು ಉತ್ತಮ ಸೇವೆ ಮಾಡಿದೆ. ಇಲ್ಲಿ ನಿವೇಶನ ಸಮಸ್ಯೆ ಇದ್ದು, ಇದಕ್ಕೊಂದು ವ್ಯವಸ್ಥೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಹೇಳಿದರು.
ಅವರು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದ.ಕ.ಇದರ ಆಶ್ರಯದಲ್ಲಿ ಪೆರ್ಮನ್ನೂರು ಸಮೀಪದ ಮಂಚಿಲ ಮದ್ರಸ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಜರುಗಿದ ಅಂಗನವಾಡಿಗೆ ಕುರ್ಚಿ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನರ್ಸರಿ ಶಾಲೆಗೆ ಅವಕಾಶ ಕಡಿಮೆ ಮಾಡಿ ಅಂಗನವಾಡಿಗೆ ಜಾಸ್ತಿ ಪ್ರಾಶಸ್ತ್ಯ ನೀಡುವ ಕೆಲಸ ಸರ್ಕಾರದಿಂದ ಆಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಚಿಲ ಅಂಗನವಾಡಿ ಕಾರ್ಯಕರ್ತೆ ಸ್ವರ್ಣ ಲತಾ ಮಂಚಿಲ ಅವರನ್ನು ಸನ್ಮಾನಿಸಲಾಯಿತು. ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಅಂಗನವಾಡಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ, ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯ ಉಪಾಧ್ಯಕ್ಷ ವಿಷ್ಣು ಮೂರ್ತಿ ಭಟ್, ಮ್ಯಾಕ್ಸಿಮ್ ಡಿ ಸೋಜ ಮುನ್ನೂರು, ಶರೀಫ್ ಬಜ್ಪೆ, ಸುಲೈಮಾನ್ ಬೈತಡ್ಕ, ಮಂಚಿಲ ಬಾಲವಿಕಾಸ ಸಮಿತಿ ಅಧ್ಯಕ್ಷ ಝುಬೈದಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಅಬ್ಬಾಸ್ ಪಡಿಕ್ಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.