ವಿಧಾನ ಪರಿಷತ್ ಚುನಾವಣೆ: ಪದವೀಧರರು, ಶಿಕ್ಷಕರು ಹೆಸರು ನೋಂದಾಯಿಸಲು ಅಹಿಂದ ಮನವಿ

Update: 2023-10-15 15:03 GMT

ಮಂಗಳೂರು, ಅ.15: ರಾಜ್ಯ ವಿಧಾನ ಪರಿಷತ್‌ಗೆ 2024ರಲ್ಲಿ ನಡೆಯುವ ಚುನಾವಣೆಗಾಗಿ ನೈರುತ್ಯ ಪದವೀಧರರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಮತದಾರರಾಗಿ ನೋಂದಾಯಿಸಲು 2023ರ ನವೆಂಬರ್ 6 ಕೊನೆಯ ದಿನವಾಗಿದೆ. ಹಾಗಾಗಿ ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕು ವ್ಯಾಪ್ತಿಯ 2020ರ ಅಕ್ಟೋಬರ್ 31ರೊಳಗೆ ಪದವಿ ಪಡೆದ ಪದವೀಧರರು ಪದವೀಧರ ಕ್ಷೇತ್ರದ ಮತದಾರರಾಗಿ ಹೆಸರು ನೋಂದಾಯಿಸಲು ಅರ್ಹರಾಗಿರುತ್ತಾರೆ.

ಪದವೀಧರರು ಪದವಿ ಅಥವಾ ಸ್ನಾತಕೋತ್ತರ ಪದವಿಯ ಸರ್ಟಿಫಿಕೇಟ್ ಅಥವಾ ಪದವಿಯ ಎಲ್ಲಾ ವರ್ಷಗಳ/ ಸೆಮಿಸ್ಟೆರ್‌ಗಳ ಮಾರ್ಕ್ಸ್ ಕಾರ್ಡ್‌ಗಳ ನೋಟರೈಸ್ಡ್ ಪ್ರತಿ,ಸ್ವ ದೃಢೀಕೃತ ಆಧಾರ್ ಕಾರ್ಡ್, ಸ್ವದೃಢೀಕೃತ ಇತ್ತೀಚಿನ ಹೊಸ ವೋಟರ್ ಐಡಿ, ಭರ್ತಿ ಮಾಡಿದ ಫಾರಂ ನಂ. 18, ಇತ್ತೀಚಿನ 2 ಪಾಸ್‌ಪೋರ್ಟ್ ಸೈಜಿನ ಕಲರ್ ಪೋಟೋ ಸಲ್ಲಿಸಬೇಕು.

ಸರಕಾರಿ/ಅರೆ ಸರಕಾರಿ/ಅನುದಾನಿತ/ಅನುದಾನ ರಹಿತ ಸಂಸ್ಥೆಗಳ ನೌಕರರಾಗಿದ್ದಲ್ಲಿ 3ನೇ ಶೆಡ್ಯೂಲ್‌ನ್ನು ಭರ್ತಿ ಮಾಡಿ, ಸಂಸ್ಥೆ/ ಇಲಾಖಾ ಮುಖ್ಯಸ್ಥರಿಂದ ಸಹಿ ಮತ್ತು ಮೊಹರಿನೊಂದಿಗೆ ದೃಢೀಕರಿಸಬೇಕು. ಬೇರೆ ಪದವೀಧರರಿಗೆ 3ನೇ ಶೆಡ್ಯೂಲ್ ಅನ್ವಯಿಸುವುದಿಲ್ಲ. ವೈದ್ಯರು, ವಕೀಲರು, ಇಂಜಿನಿಯರ್‌ಗಳು ಮತ್ತು ಚಾರ್ಟೆಡ್ ಅಕೌಂಟೆಂಟ್‌ಗಳು ಸಂಸ್ಥೆ ನೀಡಿರುವ ಪ್ರಮಾಣ ಪತ್ರದ ನೋಟರೈಸ್‌ಡ್ ಪ್ರತಿ ಲಗತ್ತಿಸಬೇಕು.

ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿ ಆರು ವರ್ಷಗಳಲ್ಲಿ ಕನಿಷ್ಠ ಮೂರು ವರ್ಷಗಳು ಬೋಧನೆ ಮಾಡಿದ ಅನುಭವವಿರಬೇಕು. ಭರ್ತಿ ಮಾಡಿದ ಫಾರಂ ನಂ. 19ರೊಂದಿಗೆ ಇತ್ತೀಚಿನ ಪಾಸ್‌ಪೋರ್ಟ್ ಸೈಜಿನ ಕಲರ್ ಫೋಟೋ, ಆಧಾರ್ ನಂಬರ್, ವೋಟರ್ ಐಡಿ, ಅನುಬಂಧ 2 ರಲ್ಲಿ ಆಯಾಯ ಇಲಾಖಾ ಮುಖ್ಯಸ್ಥರ ಸಹಿ ಹಾಗೂ ಮೊಹರು ಪಡೆದು ಸಲ್ಲಿಸಬೇಕು. ನೋಂದಾಯಿತ ಅರ್ಜಿಗಳನ್ನು ದಾಖಲೆಗಳೊಂದಿಗೆ 2023ರ ನವೆಂಬರ್ 6ರೊಳಗೆ ಆಯಾಯ ತಹಶೀಲ್ದಾರ್ ಕಚೇರಿಗೆ ಸಲ್ಲಿಸಬೇಕು. ಈ ಹಿಂದೆ 2018ನೇ ಇಸವಿಯಲ್ಲಿ ನೋಂದಾಯಿಸಿದವರು ಕೂಡಾ ಹೊಸ ನೋಂದಣಿ ಮಾಡುವುದು ಕಡ್ಡಾಯವಾಗಿದೆ.

ಹಾಗಾಗಿ ಅಹಿಂದ ಜಾತಿ-ಜನಾಂಗಗಳ ಹೆಚ್ಚಿನ ಪದವೀಧರರು ಮತ್ತು ಶಿಕ್ಷಕರು ಮತದಾರರಾಗಿ ನೋಂದಾಯಿಸಿ ಮತದಾನದಲ್ಲಿ ಭಾಗವಹಿಸಬೇಕು ಮತ್ತು ಅಲ್ಲದೆ ಸಂಘ ಸಂಸ್ಥೆಗಳು, ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳ ಆಡಳಿತ ಸಮಿತಿಗಳು ಈ ಬಗ್ಗೆ ಮುತುವರ್ಜಿ ವಹಿಸಲು ದ.ಕ. ಜಿಲ್ಲಾ ಅಹಿಂದ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ 9008503993/9343563717ನ್ನು ಸಂಪರ್ಕಿಸಬಹುದು ಅಥವಾ ಅಹಿಂದ, ದ.ಕ. ಜಿಲ್ಲೆ ನಗರದ ಸ್ಟೇಟ್‌ಬ್ಯಾಂಕ್ ಬಳಿಯ ಕ್ಯಾಪಿಟಲ್ ಅವೆನ್ಯೂ ಬಿಲ್ಡಿಂಗ್‌ನ ತಳಮಹಡಿಯಲ್ಲಿರುವ ಅಹಿಂದ ಕಚೇರಿಗೆ ಭೇಟಿ ನೀಡಿ ನಿಗದಿತ ಫಾರಂ ಮತ್ತು ಸೂಕ್ತ ಮಾಹಿತಿ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News