ವಿಟ್ಲ: ಅಂಗಡಿಗಳಿಗೆ ನುಗ್ಗಿ ನಗದು, ದಿನಸಿ ಸಾಮಾಗ್ರಿ ಕಳ್ಳತನ

Update: 2024-03-23 06:23 GMT

ಬಂಟ್ವಾಳ: ವಿಟ್ಲ ಪೇಟೆಯ ಎರಡು ಅಂಗಡಿಗಳಿಗೆ ಮತ್ತು ವಿಟ್ಲದ ಮೇಗಿನ ಪೇಟೆಯ ಒಂದು ಅಂಗಡಿಗೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಹಣ ಹಾಗೂ ದಿನಸಿ ಸಾಮಾಗ್ರಿ ಕಳ್ಳತನ ಮಾಡಿರುವ ಬಗ್ಗೆ ವರದಿಯಾಗಿದೆ.

ಚುನಾವಣೆ ಹಿನ್ನಲೆ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆಗೊಳಿಸಲಾದ ಪೊಲೀಸರು  ತಡ ರಾತ್ರಿ ಹೊತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಕಳ್ಳರು ಸಲೀಸಾಗಿ ಬಂದು ಕಳ್ಳತನ ನಡೆಸಿ ತಪ್ಪಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ವಿಟ್ಲ ಪೊಲೀಸ್ ಠಾಣೆಯ ಹಿಂಭಾಗ, ವಶ ಪಡಿಸಿಕೊಂಡ ವಾಹನಗಳನ್ನು ಸಂಗ್ರಹಿಸಿಡುವ ಸ್ಥಳಕ್ಕೆ ಹೋಗುವ ರಸ್ತೆಯಲ್ಲಿರುವ ಮಹಮ್ಮದ್ ಹಾಜಿ ಮಾಲೀಕತ್ವದ ದಿನಸಿ ಅಂಗಡಿಗೆ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್ ನಲ್ಲಿದ್ದ ರೂ 8೦೦೦ ಮತ್ತು ಕಟ್ಟಿಟ್ಟಿದ್ದ ದಿನಸಿ ಸಾಮಾಗ್ರಿಯನ್ನು ಹೊತ್ತೊಯ್ದಿದ್ದಾರೆ.

ದಿನಸಿ ಅಂಗಡಿಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ ಹಾಗೂ ಮುಖ ಚಹರೆ ಪತ್ತೆಯಾಗಿದೆ. ಅಂಗಡಿಯ ಹಿಂಭಾಗದ  ಛಾವಣಿಯ ಹಂಚು ತೆಗೆದು ಒಳ ನುಗ್ಗಿರುವ ಕಳ್ಳರು, ಕೃತ್ಯ ಎಸಗುತ್ತಿರುವುದು ಸಿಸಿಟಿವಿಯಲ್ಲಿ ಕಾಣಿಸುತ್ತಿದೆ. 

ದೀಪಕ್ ಬೀಡಿ ಕಂಟ್ರಾಕ್ಟರ್ ನಿಸಾರ್ ವಿ.ಎಸ್. ಅವರ ಬೀಡಿ ಬ್ರಾಂಚ್ ನ ಹಿಂಬದಿ ಬಾಗಿಲು ಮುರಿದು, ಒಳ ನುಗ್ಗಿದ ಕಳ್ಳರು, ಅಲ್ಲಿದ್ದ ಚಿಲ್ಲರೆ ಹಣವನ್ನು ಕದ್ದಿದ್ದಾರೆ. ಬಳಿಕ ಸಮೀಪದ ಮೇಗಿನ ಪೇಟೆಯಲ್ಲಿರುವ ಫೆಲಿಸ್ ಪಾಯಸ್ ಅವರಿಗೆ ಸೇರಿದ ಕೋಳಿಯ ಅಂಗಡಿಯ ಕಿಟಕಿ ಕಿತ್ತು ತೆಗೆದು ಒಳ ನುಗ್ಗಿದ ಕಳ್ಳರು, ಅಲ್ಲಿ ಕೂಡ ಒಂದಷ್ಟು ನಗದು ದೋಚಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News