ರೆಸ್ಟೋರೆಂಟ್ ನಿಂದ ತರಿಸಿದ ಶವರ್ಮಾ ಸೇವಿಸಿ ಬಾಲಕಿ ಮೃತ್ಯು, 43 ಮಂದಿ ಅಸ್ವಸ್ಥ
ಚೆನ್ನೈ: ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಫುಡ್ ಪಾಯಿಸನ್ ಆಗಿ 43 ಜನರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕಿ ಸೋಮವಾರ ಸಾವನ್ನಪ್ಪಿದ್ದಾಳೆ.
ನಾಮಕ್ಕಲ್ ಜಿಲ್ಲಾಧಿಕಾರಿ ಎಸ್ ಉಮಾ ಅವರ ಪ್ರಕಾರ, ಪರಮತಿ ಬಳಿಯ ರೆಸ್ಟೋರೆಂಟ್ ಒಂದರಲ್ಲಿ ಶವರ್ಮಾ, ಫ್ರೈಡ್ ರೈಸ್, ಗ್ರಿಲ್ಡ್ ಚಿಕನ್ ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸಿದ 12 ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಐದು ಮಕ್ಕಳು ಮತ್ತು ಗರ್ಭಿಣಿ ಮಹಿಳೆ ಸೇರಿದಂತೆ ಒಟ್ಟು 43 ಜನರು ಆಸ್ಪತ್ರೆ ಸೇರಿದ್ದಾರೆ ಎಂದು indianexpress.com ವರದಿ ಮಾಡಿದೆ.
ವಿದ್ಯಾರ್ಥಿನಿಯರಿಗೆ ಭೇದಿ, ತಲೆಸುತ್ತು, ವಾಂತಿ ಕಾಣಿಸಿಕೊಂಡಿದ್ದು, ಅವರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಮಾ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಮೃತ ಬಾಲಕಿಯನ್ನು ಕಲೈಯರಸಿ ಎಂದು ಗುರುತಿಸಲಾಗಿದೆ. ಬಾಲಕಿ ಶನಿವಾರ ರಾತ್ರಿ ಅದೇ ರೆಸ್ಟೋರೆಂಟ್‌ನಿಂದ ಖರೀದಿಸಿದ ಶವರ್ಮಾ ತಿಂದಿದ್ದಾಳೆ ಎಂದು ತಿಳಿದುಬಂದಿದೆ. ಆಕೆಯ ತಾಯಿ ಸುಜಾತಾ ಮತ್ತು ಇತರ ಸಂಬಂಧಿಕರು ಸಹ ಅದೇ ರೆಸ್ಟೋರೆಂಟ್‌ನಿಂದ ಆಹಾರವನ್ನು ಸೇವಿಸಿದ್ದರು.
ಮರುದಿನ ಕಲೈಯರಸಿ ತೀವ್ರ ಅಸ್ವಸ್ಥತೆ ಅನುಭವಿಸಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ರವಿವಾರವಾದ್ದರಿಂದ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಮನೆಯವರು ವಾಪಸ್ಸಾಗಿದ್ದರು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಬಾಲಕಿ ಮೃತಪಟ್ಟಿದ್ದಾಳೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳೊಂದಿಗೆ ರವಿವಾರ ರೆಸ್ಟೋರೆಂಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೀಲ್ ಹಾಕಲಾಗಿದೆ ಎಂದು ಉಮಾ ತಿಳಿಸಿದ್ದಾರೆ.
ತಪಾಸಣೆಯ ವೇಳೆ ಅಧಿಕಾರಿಗಳು ರೆಸ್ಟೋರೆಂಟ್ ನಲ್ಲಿದ್ದ ಕಚ್ಚಾ ಸಾಮಗ್ರಿಗಳು, ಮ್ಯಾರಿನೇಡ್ ಕೋಳಿ ಮತ್ತು ಇತರ ವಸ್ತುಗಳನ್ನು ನಾಶಪಡಿಸಿದ್ದಾರೆ.
“ನಾವು ರೆಸ್ಟೋರೆಂಟ್ ಅನ್ನು ಸೀಲ್ ಮಾಡಿದ್ದೇವೆ. ನಾವು ರೆಸ್ಟೋರೆಂಟ್ ನಿಂದ ಮಾದರಿಯನ್ನು ಸಂಗ್ರಹಿಸಿ ಸೇಲಂನಲ್ಲಿರುವ ವಿಶ್ಲೇಷಣಾ ಕೇಂದ್ರಕ್ಕೆ ಕಳುಹಿಸಿದ್ದು, ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ ”ಎಂದು ಅವರು ಹೇಳಿದರು.