ಎಮ್ಮೆಗೆ ಬೈಕ್ ಢಿಕ್ಕಿ ಹೊಡೆದಿದ್ದಕ್ಕೆ 16 ವರ್ಷದ ಬಾಲಕನನ್ನು ಥಳಿಸಿ ಹತ್ಯೆ
ಡುಮ್ಕಾ: ಬೈಕ್ ಒಂದು ಎಮ್ಮೆಗೆ ಢಿಕ್ಕಿ ಹೊಡೆಯಿತೆಂದು ಜನರ ಗುಂಪೊಂದು 16 ವರ್ಷದ ಬಾಲಕನನ್ನು ಥಳಿಸಿ ಹತ್ಯೆಗೈದಿರುವ ಘಟನೆ ಸೋಮವಾರ ಝಾರ್ಖಂಡ್ ರಾಜ್ಯದ ಡುಮ್ಕಾ ಜಿಲ್ಲೆಯಲ್ಲಿ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಂತಲಿ ತೋಲಾದ ಕುರ್ಮಹತ್ ಗ್ರಾಮದ ನಿವಾಸಿಯಾದ ಬಾಲಕನೋರ್ವ ರವಿವಾರ ಸಂಜೆ ಫುಟ್ ಬಾಲ್ ಪಂದ್ಯವೊಂದನ್ನು ನೋಡಿಕೊಂಡು ತನ್ನ ಮೂವರು ಗೆಳೆಯರೊಂದಿಗೆ ಬೈಕ್ ನಲ್ಲಿ ಮನೆಗೆ ಮರಳುವಾಗ ಹನ್ಸ್ ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಥತಿ ಗ್ರಾಮದಲ್ಲಿ ಎಮ್ಮೆಗೆ ಆತನ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಕೂಡಲೇ ಬಾಲಕರು ಹಾಗೂ ಎಮ್ಮೆ ಹಿಂಡಿನ ಜನರೊಂದಿಗೆ ಚಕಮಕಿ ಪ್ರಾರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಬಾಲಕರು ಎಮ್ಮೆಯ ಮಾಲಕನಿಗೆ ಪರಿಹಾರ ನೀಡಲು ಒಪ್ಪಿಕೊಂಡರೂ, ನಾಲ್ಕು ಮಂದಿ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಮೋದ್ ನಾರಾಯಣ್ ಸಿಂಗ್ ಹೇಳಿದ್ದಾರೆ.
ಕೂಡಲೇ ಗಾಯಗೊಂಡಿದ್ದ ಬಾಲಕನನ್ನು ಸರೈಯಾಹತ್ ನಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಆರೋಪಿಗಳು ಅವರ ಮೇಲೆ ದಾಳಿ ಮಾಡಿದ ಕೂಡಲೇ ಸಂತ್ರಸ್ತ ಬಾಲಕನೊಂದಿಗಿದ್ದ ಇತರ ಬಾಲಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆಯು ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಕೆಲ ಕಾಲ ಗ್ರಾಮದ ಬಳಿಯಲ್ಲಿನ ರಸ್ತೆಯನ್ನು ಬಂದ್ ಮಾಡಿದ್ದರು. ಆರೋಪಿಗಳನ್ನು ಇನ್ನೆರಡು ದಿನಗಳಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ನಂತರ ಅವರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.