ಹಿಂಸಾಚಾರಕ್ಕೆ ತಿರುಗಿದ ಮಸೀದಿ ಸಮೀಕ್ಷೆ ವಿರುದ್ಧದ ಪ್ರತಿಭಟನೆ; ಮೂವರು ಮೃತ್ಯು
ಬರೇಲಿ: ಉತ್ತರ ಪ್ರದೇಶದ ಸಂಭಾಲ್ ನಲ್ಲಿರುವ ಮೊಘಲರ ಕಾಲದ ಜಾಮಾ ಮಸೀದಿಯ ಸಮೀಕ್ಷೆಯನ್ನು ನ್ಯಾಯಾಲಯದ ಆದೇಶದಂತೆ ಕೈಗೊಂಡ ಕ್ರಮದ ವಿರುದ್ಧ ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಹಿಂಸಾಚಾರದಲ್ಲಿ ಮೂವರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪೊಲೀಸರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಪೊಲೀಸರು ಗುಂಡು ಹಾರಿಸಿದಾಗ ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಈ ಮಸೀದಿ ಮೂಲತಃ ದೇವಾಲಯವಾಗಿತ್ತು ಎಂದು ವಾದಿಸಿ ಹಿರಿಯ ವಕೀಲ ವಿಷ್ಣು ಶಂಕರ ಜೈನ್ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಆದೇಶಿಸಲಾಗಿತ್ತು.
ಭಾರತದ ಪ್ರಾಚ್ಯವಸ್ತು ಇಲಾಖೆಯ ವತಿಯಿಂದ ನ್ಯಾಯಾಲಯದ ಆಯುಕ್ತ ರಮೇಶ್ ಸಿಂಗ್ ಅವರ ನೇತೃತ್ವದಲ್ಲಿ ಹಾಗೂ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ, ಎಸ್ಪಿ ಕೃಷ್ಣನ್ ಕುಮಾರ್ ಮತ್ತು ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮುಂಜಾನೆ 7ಕ್ಕೆ ಸೀಕ್ಷೆ ಆರಂಭಿಸಲಾಗಿತ್ತು. ಆರಂಭದಲ್ಲಿ ಇಡೀ ಪ್ರಕ್ರಿಯೆ ಶಾಂತಿಯುತವಾಗಿತ್ತು. ಸುಮಾರು 9 ಗಂಟೆಯ ವೇಳೆಗೆ ಮಸೀದಿಯ ಹೊರಗಡೆ ಜನ ಗುಂಪು ಸೇರಿದರು ಹಾಗೂ ಘೋಷಣೆಗಳನ್ನು ಕೂಗಿ ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು.
"ಸುಮಾರು ಎರಡರಿಂದ ಮೂರು ಸಾವಿರ ಮಂದಿ ಗುಂಪು ಸೇರಿ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಅವರನ್ನು ಚದುರಿಸಲು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದರೂ, ಗುಂಪು ದಾಳಿಯನ್ನು ಮುಂದುರಿಸಿತು. ಪಕ್ಕದ ಮನೆಗಳಿಗೆ ಬೆಂಕಿ ಹಚ್ಚಿತು. ಪೊಲೀಸ್ ಅಧೀಕ್ಷಕರ ಪಿಆರ್ ಒ ರಮೇಶ್ ಬಾಬು ಹಾಗೂ ಸಿಪಿಐ ಅನೂಜ್ ಚೌಧರಿ ಸೇರಿದಂತೆ ಹಲವು ಮಂದಿ ಅಧಿಕಾರಿಗಳು ಇದರಿಂದ ಗಾಯಗೊಂಡರು" ಎಂದು ವಿಭಾಗೀಯ ಆಯುಕ್ತ ಆಂಜನೇಯ ಸಿಂಗ್ ವಿವರಿಸಿದ್ದಾರೆ.
ಪಿಆರ್ ಒ ಗೆ ಮುರಿತದ ಗಾಯಗಳಾಗಿದ್ದು, ಹತ್ತಾರು ಪೊಲೀಸರು ಗಾಯಗೊಂಡಿದ್ದಾರೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ.