ಸರಕಾರ ರಚನೆಗೆ ಹಕ್ಕು ಮಂಡಿಸಲು ಜಾರ್ಖಂಡ್ ರಾಜ್ಯಪಾಲರನ್ನು ಭೇಟಿಯಾದ ಹೇಮಂತ್ ಸೊರೇನ್

Update: 2024-11-24 16:47 GMT

ಹೇಮಂತ್ ಸೊರೇನ್ | PC : PTI 

ರಾಂಚಿ : ‘ಇಂಡಿಯಾ’ ಮೈತ್ರಿಕೂಟದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾದ ಹಿನ್ನೆಲೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ನಾಯಕ ಹೇಮಂತ್ ಸೊರೇನ್ ಅವರು ಸರಕಾರ ರಚನೆಗೆ ಹಕ್ಕು ಮಂಡಿಸಲು ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ರವಿವಾರ ಭೇಟಿಯಾದರು.

ರಾಜ್ಯಪಾಲರಲ್ಲಿ ಹಕ್ಕು ಮಂಡಿಸುವ ಮುನ್ನ ಸೊರೇನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾದ್ಯಮವನ್ನು ಉದ್ದೇಶಿಸಿ ಮಾತನಾಡಿದ ಸೊರೇನ್, ನಾನು ಸರಕಾರ ರಚಿಸಲು ಹಕ್ಕು ಮಂಡಿಸಿದ್ದೇನೆ ಹಾಗೂ ನಮ್ಮ ಮೈತ್ರಿಕೂಟದ ಪಾಲುದಾರರು ಬೆಂಬಲ ವ್ಯಕ್ತಪಡಿಸಿದ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇನೆ. ಸರಕಾರ ರಚಿಸುವಂತೆ ಅವರು ನಮಗೆ ಆಹ್ವಾನ ನೀಡಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ನವೆಂಬರ್ 28ರಂದು ನಡೆಯಲಿದೆ ಎಂದಿದ್ದಾರೆ.

ಜಾರ್ಖಂಡ್ ವಿಧಾನ ಸಭೆ ಚುನಾವಣೆಯಲ್ಲಿ 81 ಕ್ಷೇತ್ರಗಳ ಪೈಕಿ 56ರಲ್ಲಿ ಜಯ ಗಳಿಸುವ ಮೂಲಕ ಸೊರೇನ್ ಅವರ ಜೆಎಂಎಂ ನೇತೃತ್ವದ ಮೈತ್ರಿಕೂಟ ‘ಇಂಡಿಯಾ’ ಸತತ ಎರಡನೇ ಬಾರಿ ಅಧಿಕಾರಕ್ಕೆ ಬರುತ್ತಿದೆ. ಜೆಎಂಎಂ ನೇತೃತ್ವದ ‘ಇಂಡಿಯಾ’ಕ್ಕೆ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಕೇವಲ 24 ಕ್ಷೇತ್ರಗಳಲ್ಲಿ ಮಾತ್ರ ಜಯ ಗಳಿಸುವಲ್ಲಿ ಸಫಲವಾಗಿದೆ.

2000 ನವೆಂಬರ್ 15ರಂದು ಬಿಹಾರದಿಂದ ಪ್ರತ್ಯೇಕಿಸಿ ರಚಿಸಿದ ರಾಜ್ಯವಾದ ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಸೊರೇನ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಇದು ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದು.

ಸೊರೇನ್ ಅವರ ಸಂಪುಟಕ್ಕೆ ಕಾಂಗ್ರೆಸ್‌ನ 6 ಶಾಸಕರು ಹಾಗೂ ಆರ್‌ಜೆಡಿಯ 4 ಶಾಸಕರು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಬೇಡಿಕೆ ಇರಿಸುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಕೇಳಿ ಬಂದಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News