ಐಎಎಸ್ ಅಧಿಕಾರಿಯ ಸೋಗು ಹಾಕಿ ಜನರನ್ನು ವಂಚಿಸುತ್ತಿದ್ದ ಗುಜರಾತ್ ವ್ಯಕ್ತಿಯ ಬಂಧನ
ಅಹಮದಾಬಾದ್ : ತಾನು ಐಎಎಸ್ ಅಧಿಕಾರಿ ಎಂದು ಸೋಗು ಹಾಕಿ, ಜನರನ್ನು ವಂಚಿಸಲು ತಾನು ವಿವಿಧ ಸರಕಾರಿ ಇಲಾಖೆಗಳಿಗೆ ಸೇರಿದ್ದೇನೆ ಎಂಬ ನಕಲಿ ಪತ್ರಗಳನ್ನು ಬಳಸುತ್ತಿದ್ದ ಅರೋಪದ ಮೇಲೆ 29 ವರ್ಷದ ವ್ಯಕ್ತಿಯೊಬ್ಬನನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಜರಾತ್ ನ ಮೋರ್ಬಿ ಜಿಲ್ಲೆಯ ವಂಕನೇರ್ ನಲ್ಲಿ ಎರಡು ಶಾಲೆಗಳನ್ನು ನಿರ್ವಹಿಸುತ್ತಿರುವ, ವೃತ್ತಿಯಲ್ಲಿ ಎಂಜಿನಿಯರ್ ಆದ ಮೆಹುಲ್ ಶಾ ಎಂಬಾತ ನಕಲಿ ದಾಖಲೆಗಳು ಹಾಗೂ ಸುಳ್ಳು ಪ್ರತಿಪಾದನೆಯ ಮೂಲಕ ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ (ಅಪರಾಧ ವಿಭಾಗ) ಜೆ.ಕೆ.ಮಕ್ವಾನಾ ತಿಳಿಸಿದ್ದಾರೆ.
“ಆರೋಪಿಯು ತನ್ನನ್ನು ತಾನು ಕಂದಾಯ ಇಲಾಖೆಯ ನಿರ್ದೇಶಕ ಹಾಗೂ ಐಎಎಸ್ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ. ತನ್ನ ಕಾರಿಗೆ ಸೈರನ್ ಮತ್ತು ಪರದೆ ಅಳವಡಿಸಿಕೊಳ್ಳಲು ಕಾರ್ಯದ ಪರವಾನಗಿ ಪಡೆಯಲು ತಾನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ವಿಜ್ಞಾನ ಮತ್ತು ಸಂಶೋಧನಾಭಿವೃದ್ಧಿ ಇಲಾಖೆಯ ಅಧಿಕಾರಿ ಎಂದು ನಕಲಿ ದಾಖಲೆಗಳನ್ನು ಪ್ರದರ್ಶಿಸಿದ್ದ” ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಆರೋಪಿಯು ದೂರುದಾರರ ಪುತ್ರನಿಗೆ ಸರಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಉದ್ಯೋಗ ಕೊಡಿಸುವುದಾಗಿ ಅಹಮದಾಬಾದ್ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿಯ ಖೋಟಾ ನೇಮಕಾತಿ ಪತ್ರವನ್ನೂ ನೀಡಿದ್ದ. ತನ್ನನ್ನು ಶಾಲೆಯೊಂದರ ಟ್ರಸ್ಟಿ ಎಂದೂ ಪರಿಚಯಿಸಿಕೊಂಡಿದ್ದ ಆರೋಪಿ ಶಾ, ಶಾಲಾ ಕಟ್ಟಡಕ್ಕೆ ಬಣ್ಣ ಬಳಿದಿದ್ದ ಮತ್ತೊಬ್ಬ ದೂರುದಾರರ 7 ಲಕ್ಷ ರೂ. ಬಾಕಿಯನ್ನೂ ಪಾವತಿಸಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
“ಕೇಂದ್ರ ಅಥವಾ ರಾಜ್ಯ ಸರಕಾರಗಳಲ್ಲಿ ಆರೋಪಿಯು ಯಾವುದೇ ಅಧಿಕೃತ ಹುದ್ದೆಗಳನ್ನು ಹೊಂದಿರದಿದ್ದರೂ, ಜನರಿಗೆ ಲಕ್ಷಾಂತರ ರೂಪಾಯಿಯನ್ನು ವಂಚಿಸಲು ನಕಲಿ ಕಾರ್ಯ ಪರವಾನಗಿ ಹಾಗೂ ನಿರಾಕ್ಷೇಪಣಾ ಪ್ರಮಾಣ ಪತ್ರಗಳನ್ನು ಬಳಸಿದ್ದ” ಎಂದು ಅವರು ಹೇಳಿದ್ದಾರೆ.
ಪೊಲೀಸರು ಆತನಿಂದ ‘ಭಾರತ್ ಗೌರವ್ ರತ್ನ ಶ್ರೀ ಸಮ್ಮಾನ್ ಕೌನ್ಸಿಲ್’, ‘ವಿಜ್ಞಾನ ಮತ್ತು ಸಂಶೋಧಾನಾಭಿವೃದ್ಧಿ ಇಲಾಖೆಯ ಅಧ್ಯಕ್ಷ’, ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ’ ಹಾಗೂ ‘ರಸ್ತೆ ಮತ್ತು ನಿರ್ಮಾಣ ಇಲಾಖೆ’ ಎಂಬ ತಲೆಬರಹಗಳನ್ನು ಹೊಂದಿರುವ ನಕಲಿ ಗುರುತಿನ ಚೀಟಿಗಳು ಹಾಗೂ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ, ಮೂವರು ಸಂತ್ರಸ್ತರ ದೂರುಗಳನ್ನು ಆಧರಿಸಿ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ. “ಶಾನಿಂದ ಯಾವುದೇ ರೀತಿಯಲ್ಲಾದರೂ ವಂಚನೆಗೊಳಗಾಗಿದ್ದರೆ, ಅಂಥವರು ಮುಂದೆ ಬಂದು ದೂರು ಸಲ್ಲಿಸಬೇಕು” ಎಂದು ಪೊಲೀಸ್ ಇನ್ಸ್ ಪೆಕ್ಟರ್ ಮಕ್ವಾನಾ ಮನವಿ ಮಾಡಿದ್ದಾರೆ.