ಮಹಾರಾಷ್ಟ್ರದ ಜನರಿಗೆ ಎನ್ ಸಿಪಿ ಸ್ಥಾಪಿಸಿದ್ದು ಯಾರು ಎಂದು ಗೊತ್ತಿದೆ: ಶರದ್ ಪವಾರ್
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಮಹಾರಾಷ್ಟ್ರದ ಜನರಿಗೆ ಎನ್ ಸಿಪಿ ಸ್ಥಾಪಿಸಿದ್ದು ಯಾರು ಎಂದು ಗೊತ್ತಿದೆ ಎಂದು ಎನ್ ಸಿಪಿ ಸಂಸ್ಥಾಪಕ ಶರದ್ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿಯ ಎದುರು ಮಹಾವಿಕಾಸ್ ಅಘಾಡಿಯ(ಎಂವಿಎ) ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ಈ ಫಲಿತಾಂಶ ಅನಿರೀಕ್ಷಿತವಾಗಿದ್ದು, ಜನರು ನೀಡಿದ ನಿರ್ಧಾರ ಎಂದು ಸ್ವೀಕರಿಸಿದ್ದೇವೆ. ಅಜಿತ್ ಪವಾರ್ 288 ವಿಧಾನಸಭಾ ಕ್ಷೇತ್ರಗಳಲ್ಲಿ 41 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಆದರೆ, ಎನ್ ಸಿಪಿ ಸ್ಥಾಪಿಸಿದವರು ಯಾರು ಎಂದು ಮಹಾರಾಷ್ಟ್ರಕ್ಕೆ ತಿಳಿದಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಪಕ್ಷ ಕೇವಲ 10 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ. 1999ರಲ್ಲಿ ಎನ್ ಸಿಪಿ ಪಕ್ಷ ಸ್ಥಾಪಿಸಿದ ನಂತರ ಇದು ಅದರ ಅತಿ ಕೆಟ್ಟ ಪ್ರದರ್ಶನ ಎಂದು ಪರಿಗಣಿಸಲಾಗಿದೆ. ಅಜಿತ್ ಪವಾರ್ ಮತ್ತು ಬೆಂಬಲಿಗರು ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಮತ್ತು ಶಿವಸೇನೆ ಸರ್ಕಾರದ ಜೊತೆ ಕೈಜೋಡಿಸಿದ್ದರು. ಬಳಿಕ ಶಿಂಧೆ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು.