ಸರಕಾರ ರಚನೆ ಹಕ್ಕು ಮಂಡನೆಗೆ ಮಹಾಯುತಿ ಸನ್ನದ್ಧ | ಸಿಎಂ ಆಯ್ಕೆ ಇನ್ನೂ ನಿಗೂಢ
ಮುಂಬೈ : ಮಹಾರಾಷ್ಟ್ರದಲ್ಲಿ ಪ್ರಚಂಡ ಗೆಲುವಿನ ಬಳಿಕ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಸರಕಾರ ರಚನೆಗೆ ಹಕ್ಕು ಮಂಡಿಸಲು ಸನ್ನದ್ಧವಾಗಿದೆ. ನೂತನ ಸಂಪುಟದ ಪ್ರಮಾಣವಚನ ಕಾರ್ಯಕ್ರಮವು ಸೋಮವಾರ ನಡೆಯುವ ಸಾಧ್ಯತೆಯಿದೆಯೆಂದು ಶಿವಸೇನಾ (ಶಿಂದೆ ಬಣ)ದ ಹಿರಿಯ ನಾಯಕ ದೀಪಕ್ ಕೇಸರ್ಕರ್ ಅವರು ರವಿವಾರ ತಿಳಿಸಿದ್ದಾರೆ.ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮಾತ್ರವೇ ನಾಳೆ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ. ಸಂಪುಟಕ್ಕೆ ಯಾರೆಲ್ಲಾ ಸೇರ್ಪಡೆಗೊಳ್ಳಲಿದ್ದಾರೆಂಬ ಬಗ್ಗೆ ಈವರೆಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲವೆಂದು ಮಹಾಯುತಿ ಮೈತ್ರಿಕೂಟದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಹುದ್ದೆಗೆ ಹಾಲಿ ಸಿಎಂ ಏಕನಾಥ ಶಿಂಧೆ ಹಾಗೂ ಹಿರಿಯ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಪ್ರಮುಖ ಸ್ಪರ್ಧಿಗಳೆನ್ನಲಾಗಿದೆ. ಆದರೆ ಈ ಸಲ ಮುಖ್ಯಮಂತ್ರಿ ಸ್ಥಾನ ಯಾರ ಪಾಲಾಗಲಿದೆಯೆಂಬ ಬಗ್ಗೆ ಈವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.
ಶನಿವಾರ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಮಹಾಯುತಿ ಎರಡನೇ ಅವಧಿಗೆ ಅಧಿಕಾರಕ್ಕೇರುವುದು ಖಚಿತವಾಗುತ್ತಿದ್ದಂತೆಯೇ, ಮೈತ್ರಿಕೂಟದ ಪಕ್ಷಗ ಜೊತೆ ಸಮಾಲೋಚನೆ ನಡೆಸಿಯೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುವುದೆಂದು ದೇವೇಂದ್ರ ಫಡ್ನವೀಸ್ ಅವರು ತಿಳಿಸಿದ್ದರು.
‘‘ಮುಖ್ಯಮಂತ್ರಿ ಯಾರಾಗಬೇಕೆಂಬ ಬಗ್ಗೆ ಯಾವುದೇ ವಿವಾದವಿಲ್ಲ.ಚುನಾವಣೆ ನಡೆದ ಮೊದಲ ದಿನದಿಂದಲೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮೂರೂ ಪಕ್ಷದ (ಬಿಜೆಪಿ, ಶಿವಸೇನಾ, ಎನ್‌ಸಿಪಿ) ನಾಯಕರು ಒಟ್ಟಿಗೆ ಕುಳಿತು, ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ’’ ಎಂದು ಫಡ್ನವೀಸ್ ತಿಳಿಸಿದ್ದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 288 ಸ್ಥಾನಗಳ ಪೈಕಿ ‘ಮಹಾಯುತಿ’ 235 ಸ್ಥಾನಗಳನ್ನು ಗೆದ್ದು ಮೂರನೇ ಎರಡರಷ್ಟು ಬಹುಮತ ಪಡೆದಿದೆ. 132 ಸ್ಥಾನಗಳನ್ನು ಜಯಿಸಿರುವ ಬಿಜೆಪಿಯು ಮಹಾಯುತಿ ಮೈತ್ರಿಕೂಟದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಹಾಲಿ ಮುಖ್ಯಮಂತ್ರಿ ಶಿಂಧೆ ಅವರು ನೂತನ ಸರಕಾರದಲ್ಲಿ ಫಡ್ವವೀಸ್ ಕೈಕೆಳಗೆ ಕೆಲಸ ಮಾಡಬೇಕಾಗಿದೆಯೆಂದು ಪ್ರತಿಪಕ್ಷಗಳು ವ್ಯಂಗ್ಯವಾಡಿವೆ.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹಲವು ಆಕಾಂಕ್ಷಿಗಳಿರುವುದು, ಈ ಹಿಂದೆಯೂ ಬಿಜೆಪಿಯನ್ನು ರಾಜಕೀಯ ಬಿಕ್ಕಟ್ಟಿಗೆ ದೂಡಿತ್ತು. 2019ರಲ್ಲಿ ಉದ್ಧವ್‌ಠಾಕ್ರೆ ಹಾಗೂ ಫಡ್ನವೀಸ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದ್ದರಿಂದ ಆಗಿನ ಅವಿಭಜಿತ ಶಿವಸೇನಾ ಪಕ್ಷವು ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದಿತ್ತು.