ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ: ವಕ್ಫ್ ತಿದ್ದುಪಡಿ ಮಸೂದೆ ಸೇರಿ ಪ್ರಮುಖ ಮಸೂದೆಗಳ ಮಂಡನೆ ಸಾಧ್ಯತೆ
ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿದ್ದು, ವಕ್ಫ್ ತಿದ್ದುಪಡಿ ಮಸೂದೆ ಸೇರಿದಂತೆ ಮೂರು ಪ್ರಮುಖ ಮಸೂದೆಗಳನ್ನು ಚರ್ಚೆಗೆ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.
ಚಳಿಗಾಲದ ಅಧಿವೇಶನದ ಹಿನ್ನೆಲೆ ಸೋಮವಾರ ಬೆಳಿಗ್ಗೆ INDIA ಮೈತ್ರಿಕೂಟದ ಸದಸ್ಯರು ಸಂಸತ್ ಭವನದಲ್ಲಿ ಸಭೆ ನಡೆಸಿ ಪ್ರತಿಪಕ್ಷಗಳ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಾವು ಮಣಿಪುರ ವಿಷಯದ ಬಗ್ಗೆ ಪ್ರಸ್ತಾಪಿಸಲು ಅವಕಾಶ ಕೋರಿದ್ದೇವೆ, ಮಣಿಪುರದಲ್ಲಿ ಅತ್ಯಾಚಾರಗಳು, ಕೊಲೆಗಳು ನಡೆಯುತ್ತಿವೆ. ದೇಶದಲ್ಲಿ ನಿರುದ್ಯೋಗವಿದೆ. ಉತ್ತರಭಾರತದಲ್ಲಿ ಮಾಲಿನ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಗ್ಗೆ ನಾವು ಆತಂಕಗೊಂಡಿದ್ದೇವೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಹೇಳಿದ್ದಾರೆ.
ಚಳಿಗಾಲದ ಅಧಿವೇಶನವು ಡಿಸೆಂಬರ್ 20ರವರೆಗೆ ಮುಂದುವರಿಯಲಿದೆ. ಈ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಮಸೂದೆ, ವಿಪತ್ತು ನಿರ್ವಹಣಾ (ತಿದ್ದುಪಡಿ) ಮಸೂದೆ, ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ ಮತ್ತು ರೈಲ್ವೆ ಕಾಯ್ದೆ ತಿದ್ದುಪಡಿ ಮಸೂದೆ ಸೇರಿದಂತೆ 17 ಮಸೂದೆಗಳು ಚರ್ಚೆಗೆ ಬರುವ ಸಾಧ್ಯತೆ ಇದೆ.