ಸ್ಥಳಾಂತರಿಸುವಾಗ ಬಿಗಿಯಾಗಿ ಕತ್ತನ್ನು ಕಚ್ಚಿದ ತಾಯಿ ಹುಲಿ ; ಮೂರು ಮರಿಗಳು ಮೃತ್ಯು
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಹುಲಿಯೊಂದು ಮೂರು ಮರಿಗಳನ್ನು ಒಂದು ಸ್ಥಳದಿಂದ ಇನ್ನೊಂದು ಕಡೆಗೆ ಸ್ಥಳಾಂತರಿಸುವಾಗ, ಬಿಗಿಯಾಗಿ ಕಚ್ಚಿದ್ದರಿಂದ ಮೂರು ಮರಿಗಳು ಆಕಸ್ಮಿಕವಾಗಿ ಸಾವನ್ನಪ್ಪಿವೆ.
'ರಿಕಾ' ಎಂಬ ಹುಲಿ ಕಳೆದ ವಾರ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಗುರುವಾರ ರಾತ್ರಿ ಆಶ್ರಯದ ಆವರಣದೊಳಗೆ ಹುಲಿ ತನ್ನ ಮರಿಗಳನ್ನು ಬಾಯಿಯಲ್ಲಿ ಕಚ್ಚಿಕೊಂಡು ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾಗ ಅವುಗಳ ಶ್ವಾಸನಾಳಕ್ಕೆ ತೀವ್ರವಾಗಿ ಗಾಯವಾಗಿ ಸಾವನ್ನಪ್ಪಿದೆ ಎಂದು ಪಶ್ಚಿಮ ಬಂಗಾಳದ ಮೃಗಾಲಯ ಪ್ರಾಧಿಕಾರದ ಕಾರ್ಯದರ್ಶಿ ಸೌರವ್ ಚೌಧರಿ ತಿಳಿಸಿದ್ದಾರೆ.
ಗುರುವಾರ ರಾತ್ರಿ ಎರಡು ಹುಲಿ ಮರಿಗಳು ಸಾವನ್ನಪ್ಪಿದ್ದರೆ, ಶುಕ್ರವಾರ ಮತ್ತೊಂದು ಮರಿ ಸಾವನ್ನಪ್ಪಿತ್ತು. ಈ ಆಕಸ್ಮಿಕ ಘಟನೆಯಿಂದ ಹುಲಿ 'ರಿಕಾ' ಮರಿಗಳನ್ನು ಕಳೆದುಕೊಂಡು ಶೋಕದಲ್ಲಿ ಮುಳುಗಿದೆ ಎನ್ನುವುದು ಅದರ ವರ್ತನೆಯಿಂದ ಕಂಡು ಬಂದಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇದು ʼಹುಲಿʼ ಮರಿಗಳ ಕತ್ತನ್ನು ತಪ್ಪಾಗಿ ಕಚ್ಚಿದ ಪರಿಣಾಮದಿಂದ ಸಂಭವಿಸಿದ ಘಟನೆಯಾಗಿದೆ. ಈ ಬಗ್ಗೆ ನಾವು ಭವಿಷ್ಯದಲ್ಲಿ ಹೆಚ್ಚಿನ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.