ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್ ಅವಘಡ: ಒಂದೇ ಕುಟುಂಬದ ನಾಲ್ವರು ಮೃತ್ಯು
Update: 2023-09-02 14:58 IST

Photo credit: indiatoday.in
ಜೈಪುರ: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ಹಿಟ್ಟಿನ ಗಿರಣಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ ಅರ್ಜುನ ಸಿಂಗ್ ಅವರು ಕೆಲಸದ ನಿಮಿತ್ತ ದೆಹಲಿಯಲ್ಲಿದ್ದರು. ಅವರ ಪತ್ನಿ ಹಿಟ್ಟಿನ ಗಿರಣಿ ಯಂತ್ರವನ್ನು ನಿರ್ವಹಿಸುತ್ತಿದ್ದಾಗ ವಿದ್ಯುತ್ ಸ್ಪರ್ಶವಾಗಿದೆ. ತಾಯಿಯನ್ನು ರಕ್ಷಿಸಲು ಇಬ್ಬರು ಪುತ್ರರು ಧಾವಿಸಿದ್ದು, ಅವರಿಗೆ ಕೂಡಾ ವಿದ್ಯುತ್ ತಗುಲಿದೆ.
ಮಗಳು ಮತ್ತು ಮೊಮ್ಮಕ್ಕಳನ್ನು ರಕ್ಷಿಸಲು ಬಂದ ಅರ್ಜುನ ಅವರ ಮಾವ ಹಾಥೆ ಸಿಂಗ್ ಕೂಡ ವಿದ್ಯುತ್ ಸಂಪರ್ಕಕ್ಕೆ ಬಂದಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅರ್ಜುನ್ ಅವರು ದೂರು ನೀಡಿದ್ದಾರೆ.
ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.