ಅಪಘಾತದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡ ವ್ಯಕ್ತಿಗೆ 50 ಲಕ್ಷ ಪರಿಹಾರ
ಹೊಸದಿಲ್ಲಿ: ಶ್ರೀಲಂಕಾ ಪ್ರವಾಸದ ವೇಳೆ ನಡೆದ ಅಪಘಾತದಲ್ಲಿ ಪತ್ನಿ, ಮಗ ಹಾಗೂ ಮಾವನನ್ನು ಕಳೆದುಕೊಂಡ ದೆಹಲಿಯ ವ್ಯಕ್ತಿಯೊಬ್ಬರಿಗೆ ಪರಿಹಾರ ಮೊತ್ತವಾಗಿ 50 ಲಕ್ಷ ರೂಪಾಯಿಯನ್ನು ಪಾವತಿಸುವಂತೆ ಥಾಮಸ್ ಕುಕ್ ಮತ್ತು ರೆಡ್ ಆ್ಯಪಲ್ ಟ್ರಾವೆಲ್ ಏಜೆನ್ಸಿಗಳಿಗೆ ಆದೇಶ ನೀಡಲಾಗಿದೆ.
2019ರ ಡಿಸೆಂಬರ್ನಲ್ಲಿ ನಡೆದ ಅಪಘಾತದಲ್ಲಿ ಎನ್ಡಿಟಿವಿ ಸುದ್ದಿ ನಿರೂಪಕಿ ಮತ್ತು ಪತ್ರಕರ್ತೆ ಕನುಪ್ರಿಯಾ ಸೈಗಲ್ ಮೃತಪಟ್ಟಿದ್ದರು. ಅವರು ಪ್ರಯಾಣಿಸುತ್ತಿದ್ದ ವ್ಯಾನ್ ಕೊಲಂಬೊದಲ್ಲಿ ಟ್ರಕ್ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಆಕೆಯ ಮಗ ಶ್ರೇಯಾ ಸೈಗಲ್ ಮತ್ತು ತಂದೆ, ಖ್ಯಾತ ಹಿಂದಿ ಸಾಹಿತಿ ಗಂಗಾಪ್ರಸಾದ್ ವಿಮಲ್ ಕೂಡಾ ಪ್ರಾಣ ಕಳೆದುಕೊಂಡಿದ್ದರು. 52 ವರ್ಷ ವಯಸ್ಸಿನ ಚಾಲಕ ಕೂಡಾ ಅಪಘಾತದಲ್ಲಿ ಮೃತಪಟ್ಟಿದ್ದ. ಪತಿ ಯೋಗೀಶ್ ಸೈಗಲ್ ಹಾಗೂ ಪುತ್ರಿ ಐಶ್ವರ್ಯ ಸೈಗಲ್ ತೀವ್ರ ಗಾಯಗೊಂಡಿದ್ದರು.
ನಾಲ್ಕು ವರ್ಷಗಳ ಬಳಿಕ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ, ಯೋಗೀಶ್ ಸೈಗಲ್ ಅವರಿಗೆ ಪರಿಹಾರ ನೀಡುವಂತೆ ಟ್ರಾವೆಲ್ ಏಜೆನ್ಸಿಗಳಿಗೆ ಆದೇಶಿಸಿದೆ. "ಥಾಮಸ್ ಕುಕ್ ಹಾಗೂ ರೆಡ್ ಆ್ಯಪಲ್ ಟ್ರಾವೆಲ್ ಬಾಡಿಗೆಗೆ ಪಡೆದ ವಾಹನದ ಚಾಲಕನ ನಿರ್ಲಕ್ಷ್ಯ/ ನ್ಯೂನತೆಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಅಂತಿಮ ಲೋಪ ಈ ಏಜೆನ್ಸಿಗಳದ್ದಾಗುತ್ತದೆ. ನಾವು ಕೇವಲ ಬುಕ್ಕಿಂಗ್ ಏಜೆನ್ಸಿಗಳು ಎಂಬ ಕಾರಣ ನೀಡಿದ ಅವರು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ" ಎಂದು ವೇದಿಕೆ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸೈಗಲ್ ಕುಟುಂಬದವರು ನಿರ್ಲಕ್ಷ್ಯ ಮತ್ತು ಸೇವಾ ನ್ಯೂನತೆ, ನ್ಯಾಯಸಮ್ಮತವಲ್ಲದ ವ್ಯಾಪಾರ ಕ್ರಮ, ತಪ್ಪುದಾರಿಗೆಳೆಯುವ ಜಹೀರಾತುಗಳು ಮತ್ತು ಕಾನೂನು ವೆಚ್ಚಗಳ ವೆಚ್ಚದ ಬಗ್ಗೆ ಥಾಮಸ್ ಕುಕ್ ಹಾಗೂ ರೆಡ್ ಆ್ಯಪಲ್ ಟ್ರಾವೆಲ್ ವಿರುದ್ಧ ವೇದಿಕೆಯ ಮೊರೆ ಹೋಗಿದ್ದರು. ಅರ್ಜಿದಾರರು 8.99 ಕೋಟಿ ರೂಪಾಯಿಗಳ ಪರಿಹಾರ ಕೋರಿದ್ದರು.