ಬಾಳಾಸಾಹೇಬ್ ಠಾಕ್ರೆಯ ವಾರೀಸುದಾರಿಕೆಯನ್ನೂ ಉದ್ಧವ್ ಠಾಕ್ರೆ ಕಳೆದುಕೊಂಡರೇ?
ಮುಂಬೈ : ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ (ಎಮ್‌ವಿಎ)ಯ ಸೋಲು ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ ಉದ್ಧವ್ ಠಾಕ್ರೆ ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ದುಬಾರಿಯಾಗಲಿದೆ. ಅವರು ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರ ಮತ್ತು ಪಕ್ಷವನ್ನು ಕಳೆದುಕೊಂಡದ್ದು ಮಾತ್ರವಲ್ಲ, ಇದೀಗ ತನ್ನ ತಂದೆ ಬಾಳಾಸಾಹೇಬ್ ಠಾಕ್ರೆಯ ವಾರೀಸುದಾರಿಕೆಯನ್ನೂ ಕಳೆದುಕೊಂಡಿರುವ ಸಾಧ್ಯತೆಯಿದೆ.
ಏಕನಾಥ ಶಿಂದೆ ನೇತೃತ್ವದ ಬಂಡುಕೋರ ಶಿವಸೇನೆ ಬಣವು, ಉದ್ಧವ್ ಠಾಕ್ರೆ ಅಧಿಕಾರಕ್ಕಾಗಿ ತನ್ನ ತಂದೆಯ ತತ್ವಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದೆ ಹಾಗೂ ಈ ಚುನಾವಣೆಯು ‘ಯಾರು ನಿಜವಾದ ಶಿವಸೇನೆ’ ಎನ್ನುವುದರ ಪರೀಕ್ಷೆಯಾಗಿದೆ ಎಂದು ಹೇಳಿತ್ತು.
ಮಹಾರಾಷ್ಟ್ರ ಫಲಿತಾಂಶದ ಬೆನ್ನಿಗೇ, ತಾನೇ ಬಾಳಾ ಸಾಹೇಬ್‌ರ ವಾರೀಸುದಾರ ಎಂಬುದಾಗಿ ಶಿವಸೇನೆಯ ಏಕನಾಥ ಶಿಂದೆ ಬಣ ಘೋಷಿಸಿದೆ.
‘‘ಶಿವಸೇನೆ ಎನ್ನುವುದು ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲ. ಬಾಳಾಸಾಹೇಬ್‌ರ ಆದರ್ಶಗಳನ್ನು ಯಾರು ಮುಂದಕ್ಕೆ ಒಯ್ಯುತ್ತಿದ್ದಾರೆ ಎನ್ನುವುದನ್ನು ಜನರು ತೋರಿಸಿದ್ದಾರೆ’’ ಎಂದು ಮುಖ್ಯಮಂತ್ರಿ ಏಕನಾಥ್ ಶಿಂದೆಯ ಮಗ ಶ್ರೀಕಾಂತ್ ಶಿಂದೆ ಹೇಳಿದ್ದಾರೆ.
ಶಿವಸೇನೆಯ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಶರದ್ ಪವಾರ್‌ರೊಂದಿಗೆ ಉದ್ಧವ್ ಠಾಕ್ರೆ ಮೈತ್ರಿ ಮಾಡಿಕೊಂಡಿರುವುದೇ 2021ರ ತನ್ನ ಬಂಡಾಯಕ್ಕೆ ಕಾರಣವಾಗಿದೆ ಎಂಬುದಾಗಿ ಏಕನಾಥ ಶಿಂದೆ ಹೇಳಿರುವುದನ್ನೂ ಸ್ಮರಿಸಬಹುದಾಗಿದೆ.
ಈ ಹಿಂದೆ, ಪ್ರಧಾನಿ ನರೇಂದ್ರ ಮೋದಿಯವರೂ, ಉದ್ಧವ್ ಠಾಕ್ರೆ ಅಧಿಕಾರಕ್ಕಾಗಿ ತನ್ನ ತಂದೆಯ ಆದರ್ಶಗಳಿಂದ ವಿಮುಖರಾಗಿದ್ದಾರೆ ಎಂದು ಹೇಳಿದ್ದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, 288 ಸ್ಥಾನಗಳ ಪೈಕಿ ಶಿವಸೇನೆಯನ್ನು ಒಳಗೊಂಡ ಬಿಜೆಪಿ ಮೈತ್ರಿಕೂಟವು 233 ಸ್ಥಾನಗಳನ್ನು ಗೆದ್ದಿದೆ. ಶಿವಸೇನೆಯ ಏಕನಾಥ ಶಿಂದೆ ಬಣವು 57 ಸ್ಥಾನಗಳಲ್ಲಿ ಗೆದ್ದರೆ, ಉದ್ಧವ್ ಠಾಕ್ರೆ ಬಣವು 20 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಅಮೋಘ ನಿರ್ವಹಣೆ ನೀಡಿದ ಕೇವಲ ಆರು ತಿಂಗಳ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ.