ತೆಲಂಗಾಣ: ಭದ್ರತಾ ಪಡೆಗಳಿಂದ 7 ಮಂದಿ ಮಾವೋವಾದಿಗಳ ಹತ್ಯೆ
ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ರವಿವಾರ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ ಏಳು ಮಂದಿ ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ.
ಪೊಲೀಸ್ ಮಾಹಿತಿದಾರ ಎಂಬ ಶಂಕೆಯ ಮೇಲೆ ಮುಲುಗು ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಇಬ್ಬರನ್ನು ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ರವಿವಾರ ಬೆಳಿಗ್ಗೆ 5.30ರ ಸುಮಾರಿಗೆ ಭದ್ರತಾ ಪಡೆಗಳು ಮಾವೋವಾದಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಭದ್ರತಾ ಪಡೆಗಳ ಆದೇಶಗಳನ್ನು ಪಾಲಿಸದೆ ಮಾವೋವಾದಿಗಳು ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಗೆ 7 ಮಂದಿ ಮಾವೋವಾದಿಗಳು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಭದ್ರು ಅಲಿಯಾಸ್ ಕುರ್ಸಮ್ ಮಂಗು ಅಲಿಯಾಸ್ ಪಾಪಣ್ಣ(35), ಏಗೊಳಪು ಮಲ್ಲಯ್ಯ(43), ಮುಸ್ಸಾಕಿ ದೇವಲ್(22), ಮುಸ್ಸಾಕಿ ಜಮುನಾ(23), ಜೈ ಸಿಂಗ್(25), ಕಿಶೋರ್(22), ಕಾಮೇಶ್(23) ಭದ್ರತಾಪಡೆಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇದಲ್ಲದೆ ಭದ್ರತಾ ಪಡೆಗಳು ಮಾವೋವಾದಿಗಳಿಂದ ಎಕೆ-47, ಜಿ3 ಮತ್ತು ಐಎನ್ಎಸ್ಎಎಸ್ ರೈಫಲ್ಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ.