ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 39.5 ರೂ. ಇಳಿಕೆ
ಹೊಸದಿಲ್ಲಿ: ಸಾರ್ವಜನಿಕ ಕ್ಷೇತ್ರದ ತೈಲ ಮಾರುಕಟ್ಟೆ ಕಂಪೆನಿಗಳು ಶುಕ್ರವಾರ ನಾಲ್ಕು ಮಹಾನಗರಗಳಲ್ಲಿ ಮಾರಾಟವಾಗುವ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 39.5 ರೂ.ಯಷ್ಟು ಇಳಿಸಿವೆ.
19 ಕೆಜಿ ಅಡುಗೆ ಅನಿಲ ಇರುವ ಸಿಲಿಂಡರ್ ಒಂದರ ಬೆಲೆ ಈಗ ದಿಲ್ಲಿಯಲ್ಲಿ 1,757 ರೂಪಾಯಿ, ಕೋಲ್ಕತಾದಲ್ಲಿ 1,868.5 ರೂಪಾಯಿ, ಮುಂಬೈಯಲ್ಲಿ 1,710 ರೂಪಾಯಿ ಮತ್ತು ಚೆನ್ನೈಯಲ್ಲಿ 1,929 ರೂಪಾಯಿ ಆಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಮ್ ಕಾರ್ಪೊರೇಶನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಮ್ ಕಾರ್ಪೊರೇಶನ್ ಕಂಪೆನಿಗಳು ಅಡುಗೆ ಅನಿಲ ಸಿಲಿಂಡರ್ ಗಳನ್ನು ಮಾರಾಟ ಮಾಡುತ್ತಿವೆ.
ಶುಕ್ರವಾರ ಘೋಷಿಸಲಾಗಿರುವ ಬೆಲೆ ಕಡಿತವು ಮಧ್ಯಂತರ ಕ್ರಮವಾಗಿದೆ. ಸಾಮಾನ್ಯವಾಗಿ ಹಿಂದಿನ ತಿಂಗಳ ಅಂತರ್ರಾಷ್ಟ್ರೀಯ ತೈಲ ಬೆಲೆಯ ಸರಾಸರಿಯ ಆಧಾರದಲ್ಲಿ ಪ್ರತಿ ತಿಂಗಳ ಮೊದಲ ದಿನ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ನ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ.
ಡಿಸೆಂಬರ್ 1ರಂದು, ತೈಲ ಮಾರುಕಟ್ಟೆ ಕಂಪೆನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 21 ರೂಪಾಯಿ ಹೆಚ್ಚಿಸಿದ್ದವು.
ಆದರೆ, ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲವನ್ನು ಒಳಗೊಂಡಿರುವ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದರ ಬೆಲೆ 903 ರೂಪಾಯಿಯಲ್ಲಿ ಸ್ಥಿರವಾಗಿದೆ.
ಎರಡು ತಿಂಗಳ ತೀವ್ರ ಏರಿಕೆಯ ಬಳಿಕ, ನವೆಂಬರ್ 16ರಂದು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 57 ರೂ.ಯಷ್ಟು ಇಳಿಸಲಾಗಿತ್ತು. ಅಕ್ಟೋಬರ್ ಒಂದರಂದು 209 ರೂ. ರೂಪಾಯಿ ಏರಿಸಲಾಗಿದ್ದರೆ, ನವೆಂಬರ್ ಒಂದರಂದು ಮತ್ತೆ 100 ರೂ. ಹೆಚ್ಚಿಸಲಾಗಿತ್ತು.