ಅಮೆರಿಕದ ಮಹಿಳೆಗೆ 4 ಲಕ್ಷ ಡಾಲರ್ ವಂಚಿಸಿದ ದೆಹಲಿಯ ವ್ಯಕ್ತಿ!
ಹೊಸದಿಲ್ಲಿ: ತಾನು ಮೈಕ್ರೋಸಾಫ್ಟ್ ಏಜೆಂಟ್ ಎಂದು ಬಿಂಬಿಸಿಕೊಂಡ ದೆಹಲಿ ವ್ಯಕ್ತಿಯೊಬ್ಬ ಅಮೆರಿಕದ ಮಹಿಳೆಗೆ 4 ಲಕ್ಷ ಡಾಲರ್ ಅಂದರೆ ಸುಮಾರು 3.3 ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಲಿಸಾರೊತ್ ಎಂಬ ಮಹಿಳೆ ವಂಚನೆಗೀಡಾಗಿದ್ದು, 2023ರ ಜುಲೈ 4ರಂದು ಈ ವ್ಯಕ್ತಿ ಮಹಿಳೆಗೆ ಕರೆ ಮಾಡಿ ತಾನು ಮೈಕ್ರೋಸಾಫ್ಟ್ ಏಜೆಂಟ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ 4 ಲಕ್ಷ ಡಾಲರನ್ನು ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಗೆ ವರ್ಗಾಯಿಸುವಂತೆ ಕೇಳಿದ್ದಾನೆ. ಇದೀಗ ತಾನು ಮೋಸ ಹೋಗಿರುವುದು ಮಹಿಳೆಗೆ ಗೊತ್ತಾಗಿದೆ.
ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಕ್ಕಿ ಮತ್ತು ಕ್ರಿಪ್ಟೋಕರೆನ್ಸಿ ನಿರ್ವಹಿಸುವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಲಕ್ಷ್ಯ ವಿಜ್ ಎಂಬ ಬುಕ್ಕಿ, ಪೂರ್ವ ದೆಹಲಿಯ ದಿಲ್ಶದ್ ಗಾರ್ಡನ್ ನಿವಾಸಿಯಾಗಿದ್ದು, ಕಳೆದ ವರ್ಷ ಪೂರ್ವ ದೆಹಲಿಯ ಕ್ರಾಸ್ ರಿವರ್ ಮಾಲ್ ನಿಂದ ಗುಜರಾತ್ ಪೊಲೀಸರು ಈತನನ್ನು ಬಂಧಿಸಿದ್ದರು. ಆದರೆ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಈತನ ಬಿಡುಗಡೆಗೆ ನೆರವಾಗಿದ್ದರು ಎಂದು ಆಪಾದಿಸಲಾಗಿದೆ.
ರೊತ್ ವರ್ಗಾಯಿಸಿದ ಹಣ ಪ್ರಫುಲ್ ಪಟೇಲ್ ಮತ್ತು ಆತನ ತಾಯಿ ಸರಿತಾ ಗುಪ್ತಾ ಎಂಬವರ ಖಾತೆಗೆ ಬಂದಿದೆ. ಕರಣ್ ಚುಗ್ ಎಂಬಾತ ಗುಪ್ತಾನಿಂದ ಈ ಹಣವನ್ನು ಪಡೆದು ಬೇರೆ ಬೇರೆ ವ್ಯಾಲೆಟ್ ಗಳಿಗೆ ಠೇವಣಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಕ್ರಿಪ್ಟೊಕರೆನ್ಸಿಯನ್ನು ಮಾರಾಟ ಮಾಡುವ ಮೂಲಕ ಈ ಮೊತ್ತವನ್ನು ವಿವಿಧ ಭಾರತೀಯ ಬೋಗಸ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಬಳಿಕ ಇವರು ಫೇರ್ ಪ್ಲೇ 24ನಂಥ ಬೆಟ್ಟಿಂಗ್ ಆ್ಯಪ್ ಗಳಿಂದ ಕೂಡಾ ಹಣ ಸ್ವೀಕರಿಸಿರುವುದು ತಿಳಿದು ಬಂದಿದೆ.
ತನಿಖಾ ಏಜೆನ್ಸಿ ಅಕ್ರಮ ಹಣ ದುರುಪಯೋಗದ ಪ್ರಕರಣ ದಾಖಲಿಸಿಕೊಂಡಿದ್ದು, ಹಲವು ಕಡೆಗಳಲ್ಲಿ ದಾಳಿ ನಡೆಸಿ ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸಿತ್ತು. ಮಾತ್ರವಲ್ಲ ಈ ವಂಚನೆಯ ಮೊತ್ತವನ್ನು ಪಡೆದ ಕ್ರಿಪ್ಟೋ ವ್ಯಾಲೆಟ್ ಮಾಲೀಕರ ಹೇಳಿಕೆಗಳನ್ನು ಪಡೆದಿತ್ತು.