ಪ್ರಧಾನಿ ಅಧ್ಯಕ್ಷತೆಯಲ್ಲಿ ಬಿಜೆಪಿ ಆಡಳಿತದ ರಾಜ್ಯಗಳ ಸಿಎಂ, ಡಿಸಿಎಂಗಳ ಸಭೆ

Update: 2024-07-28 16:15 GMT

    PC : PTI 

ಹೊಸದಿಲ್ಲಿ : ಇಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರವಿವಾರ ಪಕ್ಷದ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸಭೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೇಂದ್ರ ಸಚಿವರಾದ ಅಮಿತ್ ಶಾ,ರಾಜನಾಥ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳಲ್ಲಿ ರಾಜಸ್ಥಾನದ ಭಜನ್ ಲಾಲ್ ಶರ್ಮಾ, ತ್ರಿಪುರಾದ ಮಾಣಿಕ್ ಸಹಾ, ಮಧ್ಯಪ್ರದೇಶದ ಮೋಹನ್ ಕುಮಾರ್ ಯಾದವ್, ಮಣಿಪುರದ ಎನ್.ಬೀರೇಂದ್ರ ಸಿಂಗ್, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಗುಜರಾತಿನ ಭೂಪೇಂದ್ರ ಪಟೇಲ್, ಉತ್ತರಾಖಂಡದ ಪುಷ್ಕರ ಸಿಂಗ್ ಧಾಮಿ, ಅಸ್ಸಾಮಿನ ಹಿಮಂತ್ ಬಿಸ್ವ ಶರ್ಮಾ, ಗೋವಾದ ಪ್ರಮೋದ್ ಸಾವಂತ್, ಛತ್ತೀಸ್‌ಗಡದ ವಿಷ್ಣುದೇವ್ ಸಾಯಿ, ಅರುಣಾಚಲ ಪ್ರದೇಶದ ಪೆಮಾ ಖಂಡು ಮತ್ತು ಒಡಿಶಾದ ಮೋಹನ್ ಚರಣ್ ಮಾಝ್ಹಿ ಸೇರಿದ್ದರು.

ಉಪಮುಖ್ಯಮಂತ್ರಿಗಳಾದ ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್, ಉತ್ತರ ಪ್ರದೇಶದ ಕೇಶವ್ ಪ್ರಸಾದ್ ಮೌರ್ಯ, ನಾಗಾಲ್ಯಾಂಡ್‌ನ ವೈ.ಪೈಟನ್, ಬಿಹಾರದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಹಾಗೂ ರಾಜಸ್ಥಾನದ ದಿವ್ಯಾ ಕುಮಾರಿ ಸಭೆಯಲ್ಲಿ ಪಾಲ್ಗೊಂಡಿದ್ದರು.

2024ರ ಲೋಕಸಭಾ ಚುನಾವಣೆಗಳ ಬಳಿಕ ಪ್ರಮುಖ ಬಿಜೆಪಿ ಪದಾಧಿಕಾರಿಗಳ ಅತ್ಯಂತ ದೊಡ್ಡ ಸಮಾವೇಶವಾಗಿದ್ದ ರವಿವಾರದ ಸಭೆಯು ರಾಜ್ಯ ಸರಕಾರಗಳ ಯೋಜನೆಗಳ ಕುರಿತು ಚರ್ಚೆಗಳಿಗೆ ಆದ್ಯತೆ ನೀಡಿತ್ತು. ರಾಜ್ಯಗಳು ತಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನ ಮತ್ತು ಪುನರ್‌ಪರಿಶೀಲನೆಗಾಗಿ ಮಂಡಿಸಿದ್ದವು.

‘ಪ್ರಧಾನ ಮಂತ್ರಿ ಆವಾಸ್ ಯೋಜನಾ’ ಮತ್ತು ‘ಹರ್ ಘರ್ ನಲ್ ಸೆ ಜಲ್’ನಂತಹ ಇತರ ಯೋಜನೆಗಳ ಜೊತೆಗೆ 2024 ಲೋಕಸಭಾ ಚುನಾವಣೆಗಳ ಬಗ್ಗೆಯೂ ಸಭೆಯು ಚರ್ಚಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News