ಕಣ್ಣೂರು ಅರಣ್ಯದಲ್ಲಿ ಪೋಲಿಸರ ಗುಂಡಿನಿಂದ ಗಾಯಗೊಂಡಿದ್ದ ನಕ್ಸಲ್ ಮಹಿಳೆ ಸಾವು
ಕೊಝಿಕೋಡ್(ಕೇರಳ): ಕಣ್ಣೂರು ಅರಣ್ಯದಲ್ಲಿ ನ.13ರಂದು ಪೋಲಿಸರು ನಡೆಸಿದ್ದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾವೋವಾದಿ ಕಾರ್ಯಕರ್ತೆ ಲಕ್ಷ್ಮಿ ಅಲಿಯಾಸ್ ಕವಿತಾ ಚಿಕಿತ್ಸೆಯಲ್ಲಿದ್ದಾಗ ಮೃತಪಟ್ಟಿದ್ದಾಳೆ. ಲಕ್ಷ್ಮಿ 2016ರಲ್ಲಿ ಕೇರಳದಲ್ಲಿ ಪಿಣರಾಯಿ ವಿಜಯನ್ ಸರಕಾರವು ಅಧಿಕಾರಕ್ಕೆ ಬಂದ ನಂತರ ಎನ್ಕೌಂಟರ್ ಗಳಲ್ಲಿ ಕೊಲ್ಲಲ್ಪಟ್ಟ ಒಂಭತ್ತನೇ ನಕ್ಸಲ್ ಆಗಿದ್ದಾಳೆ.
ಆಂಧ್ರಪ್ರದೇಶ ಮೂಲದ ಲಕ್ಷ್ಮಿ ಹುತಾತ್ಮಳಾಗಿದ್ದಾಳೆ ಎಂದು ಸಿಪಿಐ (ಮಾವೋವಾದಿ)ನ ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿಯ ವಕ್ತಾರ ಜೋಗಿ ಹೊರಡಿಸಿರುವ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇರಳ ಪೋಲಿಸರ ವಿಶೇಷ ಮಾವೋವಾದಿ ನಿಗ್ರಹ ಪಡೆ ಥಂಡರ್ಬೋಲ್ಟ್ಸ್ ಅಯ್ಯನಕುನ್ನು ಅರಣ್ಯದೊಳಗೆ ಸಭೆಯನ್ನು ನಡೆಸುತ್ತಿದ್ದ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ (ಪಿಎಲ್ಜಿಎ)ಯ ಕಬನಿ ದಳಂ ಸದಸ್ಯರ ಮೇಲೆ ದಿಢೀರ್ ದಾಳಿ ನಡೆಸಿತ್ತು. ದಾಳಿಯಲ್ಲಿ ಗಾಯಗೊಂಡಿದ್ದ ಲಕ್ಷ್ಮಿಯನ್ನು ಅಲ್ಲಿಂದ ಸ್ಥಳಾಂತರಿಸಲಾಗಿತ್ತು ಎಂದು ತಿಳಿಸಿರುವ ಹೇಳಿಕೆಯು, ಆಕೆ ಯಾವಾಗ ಮೃತಪಟ್ಟಿದ್ದಾಳೆ ಎನ್ನುವುದನ್ನು ಹೇಳಿಲ್ಲ.
ಅಜ್ಞಾತ ಸ್ಥಳದಲ್ಲಿ ಹುತಾತ್ಮರಿಗೆ ನೀಡುವ ಗೌರವಗಳೊಂದಿಗೆ ಲಕ್ಷ್ಮಿಯ ಮೃತದೇಹವನ್ನು ದಫನ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ.13ರ ಗುಂಡಿನ ದಾಳಿಯಲ್ಲಿ ಮಹಿಳಾ ನಕ್ಸಲ್ ಗಾಯಗೊಂಡಿದ್ದನ್ನು ತಿಳಿದಿದ್ದ ಪೋಲಿಸರು ಹಲವಾರು ದಿನಗಳ ಕಾಲ ಅರಣ್ಯದೊಳಗೆ ಶೋಧ ಕಾರ್ಯಾಚರಣೆ ನಡೆಸಿದ್ದರು. ಮಾವೋವಾದಿಗಳು ಗಾಯಾಳುವಿಗೆ ಚಿಕಿತ್ಸೆ ಕೊಡಿಸಲು ಬರಬಹುದು ಎಂಬ ನಿರೀಕ್ಷೆಯಲ್ಲಿ ಸಮೀಪದ ಆಸ್ಪತ್ರೆಗಳ ಮೇಲೂ ಪೋಲಿಸರು ಕಣ್ಗಾವಲು ಇರಿಸಿದ್ದರು.
ಲಕ್ಷ್ಮಿ 2021ರಲ್ಲಿ ಪೋಲಿಸರಿಗೆ ಶರಣಾಗಿದ್ದ ಇನ್ನೋರ್ವ ಪಿಎಲ್ಜಿಎ ಸದಸ್ಯ ರಾಮು ಅಲಿಯಾಸ್ ಲಿಜೇಶನ ಪತ್ನಿಯಾಗಿದ್ದಳು. ಪಶ್ಚಿಮ ಘಟ್ಟಗಳ ವಲಯ ಸಮಿತಿಯ ರಚನೆಗೆ ಮುನ್ನ ಲಕ್ಷ್ಮಿ ಕರ್ನಾಟಕದಲ್ಲಿ ತುಂಗಭದ್ರಾ ದಳದ ಸದಸ್ಯೆಯಾಗಿದ್ದಳು. 2015ರಲ್ಲಿ ಆಕೆ ಕಬನಿ ದಳಕ್ಕೆ ಸೇರ್ಪಡೆಗೊಂಡಿದ್ದಳು.
ಥಂಡರ್ಬೋಲ್ಟ್ಸ್ ಕಳೆದ ತಿಂಗಳು ತಮ್ಮ ಮೇಲೆ ನಾಲ್ಕು ಸಲ ದಾಳಿಗಳನ್ನು ನಡೆಸಿದೆ ಎಂದು ತಿಳಿಸಿರುವ ಮಾವೋವಾದಿಗಳು,ಈ ದಾಳಿಗಳು ಆರೆಸ್ಸೆಸ್ ನಿಯಂತ್ರಿತ ಕೇಂದ್ರ ಸರಕಾರದ ʼಆಪರೇಷನ್ ಸಮಾಧಾನ್ʼ ನ ಭಾಗವಾಗಿದ್ದವು ಎಂದು ಆರೋಪಿಸಿದ್ದಾರೆ.
ಮಾವೋವಾದಿಗಳು ವಯನಾಡಿನ ತಿರುನೆಲ್ಲಿಯ ಬುಡಕಟ್ಟು ಕಾಲನಿಗಳಲ್ಲಿ ಅಂಟಿಸಿರುವ ಪೋಸ್ಟರ್ಗಳಲ್ಲಿ ತಮ್ಮ ಕಾಮ್ರೇಡ್ ಹತ್ಯೆಯ ಸೇಡನ್ನು ತೀರಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ.