'ಲ್ಯಾಟರಲ್ ಎಂಟ್ರಿ' ರದ್ದತಿ | ಯಾವುದೇ ಬೆಲೆ ತೆತ್ತಾದರೂ ಸಂವಿಧಾನ, ಮೀಸಲಾತಿಯ ರಕ್ಷಣೆ: ರಾಹುಲ್ ಗಾಂಧಿ
ನವದೆಹಲಿ: ಯಾವುದೇ ಬೆಲೆ ತೆತ್ತಾದರೂ ಸಂವಿಧಾನ ಮತ್ತು ಮೀಸಲಾತಿ ವ್ಯವಸ್ಥೆಯನ್ನು ರಕ್ಷಣೆ ಮಾಡುತ್ತೇವೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಖಾಸಗಿಯವರಿಗೆ ಅವಕಾಶ ಮಾಡಿಕೊಡಲು 'ಲ್ಯಾಟರಲ್ ಎಂಟ್ರಿ'ಯ ಜಾಹೀರಾತನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ, 'ನಾವು ಯಾವುದೇ ಬೆಲೆ ತೆತ್ತಾದರೂ ಸಂವಿಧಾನ ಮತ್ತು ಮೀಸಲಾತಿ ವ್ಯವಸ್ಥೆಯ ರಕ್ಷಣೆ ಮಾಡುತ್ತೇವೆ. 'ಲ್ಯಾಟರಲ್ ಎಂಟ್ರಿ'ಯಂತಹ ಬಿಜೆಪಿಯ ಸಂಚನ್ನು ವಿಫಲಗೊಳಿಸುತ್ತೇವೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
'ಶೇ 50ರ ಮೀಸಲಾತಿ ಮಿತಿಯನ್ನು ತೆರವುಗೊಳಿಸುವ ಮೂಲಕ ನಾವು ಜಾತಿ ಜನಗಣತಿಯ ಆಧಾರದ ಸಾಮಾಜಿಕ ನ್ಯಾಯವನ್ನು ಖಾತರಿ ಪಡಿಸಲಿದ್ದೇವೆ' ಎಂದು ರಾಹುಲ್ ಪುನರುಚ್ಚರಿಸಿದ್ದಾರೆ.
ಆಗಸ್ಟ್ 17ರಂದು ಯುಪಿಎಸ್‌ಸಿ ಅಧಿಸೂಚನೆಯನ್ನು ಹೊರಡಿಸಿ, 45 ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳನ್ನು 'ಲ್ಯಾಟರಲ್ ಎಂಟ್ರಿ' ಮೂಲಕ ನೇಮಕ ಮಾಡುವುದಾಗಿ ಹೇಳಿತ್ತು.
'ಲ್ಯಾಟರಲ್ ಎಂಟ್ರಿ' ಕ್ರಮವು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ಮೀಸಲಾತಿಯನ್ನು ಕಸಿದುಕೊಳ್ಳುವ ನಡೆ ಎಂದು ಕಾಂಗ್ರೆಸ್ ಹಾಗೂ ವಿಪಕ್ಷಗಳು ಆರೋಪಿಸಿದ್ದವು. ಸರ್ಕಾರದ ಉನ್ನತ ಹುದ್ದೆಗಳಿಗೆ 'ಲ್ಯಾಟರಲ್ ಎಂಟ್ರಿ' ಮೂಲಕ ಖಾಸಗಿ ವಲಯದ ತಜ್ಞರು ಹಾಗೂ ಪರಿಣತರನ್ನು ನೇಮಕ ಮಾಡಿಕೊಳ್ಳುವುದಕ್ಕೆ ವಿಪಕ್ಷಗಳು ವಿರೋಧಿಸಿದ್ದವು.
ವಿರೋಧ ವ್ಯಕ್ತವಾಗುತ್ತಿದ್ದಂತೆ, ಕೇಂದ್ರದ ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಅಧ್ಯಕ್ಷೆ ಪ್ರೀತಿ ಸೂದನ್ ಅವರಿಗೆ ಪತ್ರ ಬರೆದು 'ಲ್ಯಾಟರಲ್ ಎಂಟ್ರಿ' ಸಂಬಂಧಿತ ಇತ್ತೀಚಿನ ಜಾಹೀರಾತನ್ನು ರದ್ದು ಮಾಡುವಂತೆ ನಿರ್ದೇಶನ ನೀಡಿದ್ದರು.