ಸುಪ್ರೀಂ ಕೋರ್ಟ್ ಮನವಿ,ಭರವಸೆಯ ಬಳಿಕ 11 ದಿನಗಳ ಮುಷ್ಕರ ಕೈಬಿಟ್ಟ ಏಮ್ಸ್ ವೈದ್ಯರು

Update: 2024-08-22 15:07 GMT

PC : PTI

ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯದ ಮನವಿಯ ಹಿನ್ನೆಲೆಯಲ್ಲಿ, ಕೋಲ್ಕತಾದ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಕಳೆದ 11 ದಿನಗಳಿಂದ ತಾವು ನಡೆಸುತ್ತಿದ್ದ ಮುಷ್ಕರವನ್ನು ಹಿಂದೆಗೆದುಕೊಂಡಿರುವುದಾಗಿ ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯ ವೈದ್ಯರು ಗುರುವಾರ ಪ್ರಕಟಿಸಿದ್ದಾರೆ.

ಇದಕ್ಕೂ ಮುನ್ನ ಕರ್ತವ್ಯಕ್ಕೆ ಮರಳುವಂತೆ ಪ್ರತಿಭಟನಾ ನಿರತ ವೈದ್ಯರಿಗೆ ಸೂಚಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಅವರು ಕರ್ತವ್ಯಕ್ಕೆ ಹಾಜರಾದ ಬಳಿಕ ಅವರ ವಿರುದ್ಧ ಯಾವುದೇ ಪ್ರತಿಕೂಲ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿತ್ತು.

‘ಆರ್‌ಜಿ ಕರ್ ಆಸ್ಪತ್ರೆ ಘಟನೆಯ ತನಿಖೆ ಮತ್ತು ವೈದ್ಯರ ಸುರಕ್ಷತೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಭರವಸೆ ಮತ್ತು ಮಧ್ಯಪ್ರವೇಶದ ಬಳಿಕ ನಾವು ಕರ್ತವ್ಯಕ್ಕೆ ಮರಳುತ್ತಿದ್ದೇವೆ. ಸರ್ವೋಚ್ಚ ನ್ಯಾಯಾಲಯದ ಕ್ರಮವನ್ನು ನಾವು ಒಪ್ಪಿಕೊಂಡಿದ್ದು, ಅದರ ನಿರ್ದೇಶನಗಳಿಗೆ ಬದ್ಧರಾಗಿರುತ್ತೇವೆ’ ಎಂದು ಏಮ್ಸ್ ನಿವಾಸಿ ವೈದ್ಯರ ಸಂಘವು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಕೋಲ್ಕತಾದ ಸರಕಾರಿ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ವೈದ್ಯರ ಸಂಘಗಳು ಆ.12ರಿಂದ ದೇಶವ್ಯಾಪಿ ಪ್ರತಿಭಟನೆಗಳನ್ನು ಆರಂಭಿಸಿದ್ದು, ಹೊರರೋಗಿ ವಿಭಾಗದ ಸೇವೆಗಳು ಸ್ಥಗಿತಗೊಂಡಿದ್ದವು. ಆದರೆ ತುರ್ತು ವೈದ್ಯಕೀಯ ಸೇವೆಗಳು ಎಂದಿನಂತೆ ಮುಂದುವರಿದಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News