ಆಲಿಗಢ ಮುಸ್ಲಿಂ ವಿವಿಗೆ ಬಾಂಬ್ ಬೆದರಿಕೆ
Update: 2025-01-10 05:56 GMT
ಲಕ್ನೊ (ಉತ್ತರ ಪ್ರದೇಶ): ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಗುರುವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಒಡ್ಡಲಾಗಿದೆ. 2 ಲಕ್ಷ ರೂ. ನೀಡದಿದ್ದರೆ ವಿಶ್ವವಿದ್ಯಾಲಯದಲ್ಲಿ ಬಾಂಬ್ ಸ್ಫೋಟಿಸಲಾಗುವುದು ಎಂದು ಈಮೇಲ್ ನಲ್ಲಿ ಬೆದರಿಕೆ ಹಾಕಲಾಗಿದೆ.
ಈ ಬೆದರಿಕೆ ಇಮೇಲ್ ಬಹಿರಂಗಗೊಳ್ಳುತ್ತಿದ್ದಂತೆಯೆ, ವಿಶ್ವವಿದ್ಯಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ತಂಡದ ಸದಸ್ಯರು, ವಿಶ್ವವಿದ್ಯಾಲಯದ ಆವರಣದ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ವಿಶ್ವವಿದ್ಯಾಲಯದ ಎಲ್ಲ ಮೂಲೆಗಳು, ಜನರಹಿತ ಪ್ರದೇಶಗಳು ಸೇರಿದಂತೆ ಎಲ್ಲ ನಿರ್ಬಂಧಿತ ಪ್ರದೇಶಗಳನ್ನು ಶ್ವಾನ ದಳ ಹಾಗೂ ಬಾಂಬ್ ಪತ್ತೆ ದಳದ ಸದಸ್ಯರಿಂದ ಪರಿಶೀಲಿಸಲಾಗುತ್ತಿದೆ. ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಸ್ಪಷ್ಟವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.