ಭಯೋತ್ಪಾದಕರೊಂದಿಗೆ ನಂಟು ಆರೋಪ ; ಜಮ್ಮು-ಕಾಶ್ಮೀರದಲ್ಲಿ ನಾಲ್ವರು ಸರಕಾರಿ ಉದ್ಯೋಗಿಗಳ ವಜಾ

Update: 2023-11-22 14:56 GMT

Photo : ANI

ಜಮ್ಮು: ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ, ಜಮ್ಮು ಮತ್ತು ಕಾಶ್ಮೀರ ಸರಕಾರವು ಬುಧವಾರ ಓರ್ವ ವೈದ್ಯ ಮತ್ತು ಓರ್ವ ಪೊಲೀಸ್ ಸೇರಿದಂತೆ ಇನ್ನೂ ನಾಲ್ವರು ಸರಕಾರಿ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಶ್ರೀನಗರದ ಎಸ್ಎಮ್ಎಚ್ಎಸ್ ಆಸ್ಪತ್ರೆಯ ಸಹಾಯಕ ಪ್ರೊಫೆಸರ್ ನಿಸಾರುಲ್ ಹಸನ್, ಪೊಲೀಸ್ ಕಾನ್ಸ್ಟೇಬಲ್ ಅಬ್ದುಲ್ ಮಜೀದ್ ಭಟ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಯೋಗಾಲಯ ಸಿಬ್ಬಂದಿಯಾಗಿರುವ ಅಬ್ದುಲ್ ಸಲಾಮ್ ರಾತೆರ್ ಮತ್ತು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿರುವ ಫಾರೂಕ್ ಅಹ್ಮದ್ ಮಿರ್ ವಜಾಗೊಂಡಿರುವ ಸರಕಾರಿ ಉದ್ಯೋಗಿಗಳು.

ಅವರನ್ನು ಭಾರತೀಯ ಸಂವಿಧಾನದ 11ನೇ ವಿಧಿಯಡಿ ವಜಾಗೊಳಿಸಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ, ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದ ಆಡಳಿತವು ಸಂವಿಧಾನದ 311 (2)(ಸಿ) ವಿಧಿಯಡಿಯಲ್ಲಿ ತನ್ನ 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕರ್ತವ್ಯದಿಂದ ವಜಾಗೊಳಿಸಿದೆ.

‘‘ಅವರು ಸರಕಾರಿ ಬೊಕ್ಕಸದಿಂದ ಸಂಬಳ ಪಡೆದು ಪಾಕಿಸ್ತಾನದ ಭಯೋತ್ಪಾದಕರ ಪರವಾಗಿ ಕೆಲಸ ಮಾಡುತ್ತಿದ್ದರು. ಭಯೋತ್ಪಾದಕರಿಗೆ ಸಲಕರಣೆಗಳನ್ನು ಪೂರೈಸುತ್ತಿದ್ದರು, ಭಯೋತ್ಪಾದಕ ಸಿದ್ಧಾಂತವನ್ನು ಹರಡುತ್ತಿದ್ದರು, ಭಯೋತ್ಪಾದನೆಗೆ ಹಣ ಸಂಗ್ರಹಣೆ ಕಾರ್ಯದಲ್ಲಿ ತೊಡಗಿದ್ದರು ಮತ್ತು ವಿಭಜನವಾದಿ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಿದ್ದರು’’ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News