ಕೆಟ್ಟು ನಿಂತ ಕಾರು: ತಂದೆ-ಮಕ್ಕಳ ಅಪಹರಣ ಯತ್ನ ವಿಫಲ!
ಹೊಸದಿಲ್ಲಿ: ಓರ್ವ ವ್ಯಕ್ತಿ ಹಾಗೂ ಆತನ ಇಬ್ಬರು ಮಕ್ಕಳನ್ನು ಅಪಹರಿಸಲು ಪ್ರಯತ್ನಿಸಿದ ನಾಲ್ವರ ಮೇಲೆ ಸುರಾಜ್ ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಹರಣದ ಸಂದರ್ಭದಲ್ಲಿ ತಂದೆಯು ಜೋರಾಗಿ ಕೂಗಿಕೊಂಡಿದ್ದರಿಂದ, ಶಂಕಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಸುರಾಜ್ ಪುರ್ ನಿಂದ ಇಬ್ಬರು ಅಪ್ರಾಪ್ತ ಮಕ್ಕಳು ಹಾಗೂ ಅವರ ತಂದೆಯನ್ನು ಅಪಹರಿಸಲು ಯತ್ನಿಸಿದ ಘಟನೆಯಲ್ಲಿ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರಾಜ್ ಪುರ್ ಪಟ್ಟಣದ ನಿವಾಸಿ ಹಾಗೂ ಗ್ರೇಟರ್ ನೋಯ್ಡಾದಲ್ಲಿನ ಸೂತಿಯಾನಾ ಗ್ರಾಮದ ಮೂಲ ನಿವಾಸಿಯಾದ ತಂದೆ ಸುಭಾಶ್ ಕಶ್ಯಪ್ ಪ್ರಕಾರ, ಶಾಲೆಯಿಂದ ತನ್ನ 11 ಮತ್ತು 17 ವರ್ಷದ ಮಕ್ಕಳನ್ನು ಕರೆತರಲು ಹೋದಾಗ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆ ಈ ಘಟನೆ ನಡೆಯಿತು ಎಂದು ಹೇಳಿದ್ದಾರೆ.
“ನಾನು ನನ್ನ ಕಪ್ಪು ಬಣ್ಣದ ಸ್ಕಾರ್ಪಿಯೊ ಕಾರಿನಲ್ಲಿ ನನ್ನ ಮಕ್ಕಳನ್ನು ಕರೆದುಕೊಂಡು ಮನೆಯತ್ತ ತೆರಳುವಾಗ, ದಾದ್ರಿ ಮುಖ್ಯ ರಸ್ತೆಯಲ್ಲಿ ಬಿಳಿ ಬಣ್ಣದ ಬ್ರೆಝಾ ಕಾರೊಂದು ನಮ್ಮನ್ನು ಅಡ್ಡಗಟ್ಟಿತು. ಆ ಕಾರಿನಲ್ಲಿ ನಾಲ್ಕು ಮಂದಿಯಿದ್ದರು ಹಾಗೂ ಅದರಿಂದ ಕೆಳಗಿಳಿದ ಮೂರು ಮಂದಿ ಬಲವಂತವಾಗಿ ನನ್ನ ಕಾರೊಳಗೆ ಪ್ರವೇಶಿಸಿದರು. ಈ ಪೈಕಿ ಇಬ್ಬರು ಶಂಕಿತರನ್ನು ಸೂತಿಯಾನಾ ಗ್ರಾಮದವರೇ ಆದ ರೋಹಿತ್ ಸಿಂಗ್ ಮತ್ತು ಆಕಾಶ್ ಎಂದು ನಾನು ಗುರುತಿಸಿದೆ” ಎಂದು 35 ವರ್ಷ ವಯಸ್ಸಿನ ಕಶ್ಯಪ್ ತಿಳಿಸಿದ್ದಾರೆ.
ಶಂಕಿತರು ನನ್ನ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಸ್ಕಾರ್ಪಿಯೊವನ್ನು ಮುಂದಕ್ಕೆ ಚಲಾಯಿಸತೊಡಗಿದರೆ, ಮತ್ತೊಬ್ಬ ಶಂಕಿತ ಬ್ರೆಝಾ ಕಾರಿನಲ್ಲಿ ಅದರ ಮುಂದೆ ಹೋಗುತ್ತಿದ್ದ ಎಂದೂ ಅವರು ಆರೋಪಿಸಿದ್ದಾರೆ. “ಕಾರು ಚಲಾಯಿಸುವಾಗ ಆ ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ನಡೆಸಿದರು ಮತ್ತು ನನ್ನ ಮಕ್ಕಳ ಮೇಲೂ ಹಲ್ಲೆ ನಡೆಸುವ ಬೆದರಿಕೆ ಒಡ್ಡಿದರು. ಆದರೆ, ಕೆಲವೇ ಹೊತ್ತಿನಲ್ಲಿ ನನ್ನ ಸ್ಕಾರ್ಪಿಯೋ ಕಾರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿತು ಹಾಗೂ ಅಕ್ಕಪಕ್ಕದಲ್ಲಿ ಚಲಿಸುತ್ತಿದ್ದವರ ಗಮನ ಸೆಳೆಯಲು ನಾನು ಅಪಾಯಕ್ಕೆ ಸಿಲುಕಿದ್ದೇನೆ ಎಂದು ಕೂಗಿಕೊಂಡೆನು. ಆಗ ನಾವು ಬಂಧನಕ್ಕೊಳಗಾಗಬಹುದು ಎಂಬ ಅನುಮಾನಕ್ಕೊಳಗಾದ ಶಂಕಿತರು ಕಾರಿನಿಂದ ಇಳಿದು ಪರಾರಿಯಾದರು. ಈ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ” ಎಂದು ಕಶ್ಯಪ್ ಹೇಳಿದ್ದಾರೆ.
ಸೂತಿಯಾನಾ ಗ್ರಾಮದಲ್ಲಿ ನನ್ನ ಕುಟುಂಬ ಹಾಗೂ ಸಿಂಗ್ ಕುಟುಂಬಗಳು ಈ ವರ್ಷಾರಂಭದಲ್ಲಿ ಕಲಹವೊಂದರಲ್ಲಿ ಭಾಗಿಯಾಗಿದ್ದವು ಎಂದೂ ಅವರು ಹೇಳಿದ್ದಾರೆ.
ಸೆಂಟ್ರಲ್ ನೋಯ್ಡಾದ ಉಪ ಪೊಲೀಸ್ ಆಯುಕ್ತ ಅನಿಲ್ ಕುಮಾರ್ ಯಾದವ್, “ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಕಶ್ಯಪ್ ಅವರ ಸಹೋದರ ಸಂಬಂಧಿಗಳು ಸಿಂಗ್ ರೊಂದಿಗೆ ಸಂಬಂಧವಿರುವ ಸೂತಿಯಾನಾದ ಕೆಲವು ವ್ಯಕ್ತಿಗಳೊಂದಿಗೆ ನಡೆದ ಕಲಹದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಜೂನ್ 14ರಂದು ಅವರೊಂದಿಗೆ ತಿಕ್ಕಾಟ ನಡೆದಿತ್ತು. ಈ ಸಂಬಂಧ ಇಕೋಟೆಕ್ 3 ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
“ಅಪಹರಣ ಪ್ರಯತ್ನದ ಸಂದರ್ಭದಲ್ಲಿ ಕಶ್ಯಪ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾವು ಅಪಹರಣ ನಡೆದ ಪ್ರದೇಶದಿಂದ ಸಿಸಿಟಿಟಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯುತ್ತಿದ್ದು, ಎಲ್ಲ ಆಯಾಮಗಳಲ್ಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ದೂರುದಾರರು ತಮ್ಮ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದರೆ, ಮಕ್ಕಳು ಸುರಕ್ಷಿತವಾಗಿದ್ದಾರೆ. ಕಶ್ಯಪ್ ಅವರು ನೀಡಿರುವ ದೂರನ್ನು ಆಧರಿಸಿ, ಸಿಂಗ್, ಆಕಾಶ್ ಹಾಗೂ ಇನ್ನಿಬ್ಬರು ಅಪರಿಚಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341 (ಅಕ್ರಮ ಬಂಧನ), 323 (ಹಲ್ಲೆ) ಹಾಗೂ 364 (ಅಪಹರಣ) ಅಡಿ, ಸೂರಜ್ ಪುರ್ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ ಅನಿಲ್ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.