ಲೋಕಸಭೆ ಅಧಿವೇಶನ: ಸಂಭಾಲ್ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸುವಂತೆ ʼನಿಲುವಳಿ ಸೂಚನೆʼ ಸಲ್ಲಿಸಿದ ಉವೈಸಿ
ಹೊಸದಿಲ್ಲಿ: ಉತ್ತರ ಪ್ರದೇಶದ ಸಂಭಾಲ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ತುರ್ತು ಚರ್ಚೆ ನಡೆಸುವಂತೆ ಸಂಸದ ಅಸದುದ್ದೀನ್ ಉವೈಸಿ ಲೋಕಸಭೆಯಲ್ಲಿ ನಿಲುವಳಿ ಸೂಚನೆ ಸಲ್ಲಿಸಿದ್ದಾರೆ.
ಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಸಂಸತ್ತಿನಲ್ಲಿ ನಿಲುವಳಿ ಸೂಚನೆ (ಅಡ್‌ಜರ್ನ್‌ಮೆಂಟ್ ಮೋಷನ್) ಸಲ್ಲಿಕೆ ಮಾಡಿದ್ದಾರೆ. ನಾಲ್ಕು ಜೀವಗಳನ್ನು ಬಲಿ ಪಡೆದ ಘಟನೆಯು ಈ ಪ್ರದೇಶದಲ್ಲಿ ಗಂಭೀರ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕಾನೂನು ಕ್ರಮ ಕೈಗೊಳ್ಳುವ ತುರ್ತು ಅಗತ್ಯ ಇದೆ. ಸಂಸತ್ತಿನಲ್ಲಿ ಇಂತಹ ಘಟನೆಗಳನ್ನು ಚರ್ಚಿಸುವುದು ಹೊಣೆಗಾರಿಕೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಿರ್ಣಾಯಕವಾಗಿದೆ ಎಂದು ಉವೈಸಿ ಹೇಳಿದ್ದಾರೆ.
ಸಂಭಾಲ್ ನ ಜಾಮಾ ಮಸೀದಿಯ ಆವರಣದಲ್ಲಿ ಸಮೀಕ್ಷೆ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು.