"ಅಧ್ಯಕ್ಷರು ನಮ್ಮ ಮಾತು ಕೇಳುತ್ತಿಲ್ಲ": ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸಮಿತಿ ಸದಸ್ಯರಿಂದ ಸ್ಪೀಕರ್ ಗೆ ದೂರು
ಹೊಸದಿಲ್ಲಿ: ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಸಂಸತ್ತಿನ ಜಂಟಿ ಸಮಿತಿಯಲ್ಲಿನ ವಿರೋಧ ಪಕ್ಷದ ಸಂಸದರು ಸೋಮವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ನಮ್ಮ ಮಾತು ಕೇಳುತ್ತಿಲ್ಲ ಎಂದು ದೂರನ್ನು ನೀಡಿದ್ದಾರೆ.
ಜಂಟಿ ಸಮಿತಿ ಸದಸ್ಯರು ಸಭಾಧ್ಯಕ್ಷರಿಗೆ ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ ವಿರೋಧ ಪಕ್ಷದ ಸದಸ್ಯರು ಸಂಸತ್ತಿನ ಜಂಟಿ ಸಮಿತಿಯ ಅವಧಿಯನ್ನು ವಿಸ್ತರಿಸುವಂತೆ ಮತ್ತು ಶಾಸನದ ಬಗ್ಗೆ ವಸ್ತುನಿಷ್ಠ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ.
ಸಭಾಧ್ಯಕ್ಷರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಂಕೆ ಸಂಸದ ಎ. ರಾಜಾ, ಸಭಾಪತಿಯವರು ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸುತ್ತಿಲ್ಲ ಎಂದು ನಾವು ಸ್ಪೀಕರ್ ಗೆ ದೂರುಗಳನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ನಾವು ಲೋಕಸಭೆ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದೇವೆ, ಜೆಪಿಸಿ ಅಧ್ಯಕ್ಷರು ನಮ್ಮ ಮಾತು ಕೇಳುತ್ತಿಲ್ಲ, ತರಾತುರಿಯಲ್ಲಿ ವರದಿ ನೀಡಲು ಸಾಧ್ಯವಿಲ್ಲ, ಸ್ಪೀಕರ್ ಅವರು ನಮ್ಮ ಭಾವನೆಗಳನ್ನು ಗೌರವಿಸುತ್ತಾರೆ ಮತ್ತು ಕಾಲಾವಧಿಯನ್ನು ವಿಸ್ತರಿಸುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಡಿಎಂಕೆ ಸಂಸದರಾದ ಎ ರಾಜಾ, ಎಂ ಅಬ್ದುಲ್ಲಾ, ಕಾಂಗ್ರೆಸ್ ಸಂಸದರಾದ ನಾಸೀರ್ ಹುಸೇನ್, ಮೊಹಮ್ಮದ್ ಜಾವೇದ್, ಇಮ್ರಾನ್ ಮಸೂದ್, ತೃಣಮೂಲ ಪಕ್ಷದ ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಎಂ ನಾದಿಮುಲ್ ಹಕ್, ಎಎಪಿ ಸಂಸದ ಸಂಜಯ್ ಸಿಂಗ್, ಎಸ್ ಪಿ ಸಂಸದ ಮೊಹಿಬ್ಬುಲ್ಲಾ ಮತ್ತು ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಅವರ ನಿಯೋಗ ಸ್ಪೀಕರ್ ಅವರನ್ನು ಭೇಟಿ ಮಾಡಿ ದೂರನ್ನು ನೀಡಿದೆ.