ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಫಡ್ನವೀಸ್ ನೇಮಕ ಸಾಧ್ಯತೆ; ಅಜಿತ್ ಪವಾರ್, ಶಿಂಧೆಗೆ ಡಿಸಿಎಂ ಪಟ್ಟ?: ವರದಿ
ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿಗಳಾಗಿ ಎನ್ ಸಿಪಿಯಿಂದ ಅಜಿತ್ ಪವಾರ್ ಮತ್ತು ಶಿವಸೇನೆಯಿಂದ ಏಕನಾಥ್ ಶಿಂಧೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು THE INDIAN EXPRESS ವರದಿ ಮಾಡಿದೆ.
ಬಿಜೆಪಿಯ ಉನ್ನತ ನಾಯಕತ್ವವು ಸೋಮವಾರ ಫಡ್ನವೀಸ್ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಅಂತಿಮಗೊಳಿಸಿದೆ ಎಂದು ಹೇಳಲಾಗಿದ್ದು, ಈ ಪ್ರಸ್ತಾವಕ್ಕೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಅನುಮೋದನೆ ನೀಡಿದೆ ಎಂದು ಬಿಜೆಪಿಯಲ್ಲಿನ ಕೆಲ ಮೂಲಗಳು ತಿಳಿಸಿದೆ.
ನೂತನ ಸರಕಾರದಲ್ಲಿ ಸಿಎಂ ಹುದ್ದೆ ನಿರೀಕ್ಷೆಯಲ್ಲಿದ್ದ ಶಿಂಧೆ, ಪವಾರ್ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಕೆಲವು ಪ್ರಮುಖ ಖಾತೆಗಳು ಸೇರಿದಂತೆ 12 ಸಚಿವ ಸ್ಥಾನಗಳನ್ನು ಶಿವಸೇನೆಗೆ ನೀಡಬಹುದು ಎಂದು ಮೂಲಗಳು ತಿಳಿಸಿದೆ. ಎನ್ ಸಿಪಿಗೆ ಕೂಡ 10 ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. 132 ಶಾಸಕರನ್ನು ಹೊಂದಿರುವ ಬಿಜೆಪಿ 21 ಸಚಿವ ಸ್ಥಾನಗಳನ್ನು ತನ್ನಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಇದೆ.
ಗೃಹ, ಹಣಕಾಸು, ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳನ್ನು ಬಿಜೆಪಿ ತನ್ನಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಈ ಕುರಿತು ಇನ್ನು ಕೂಡ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.