ಆರ್ಥಿಕ ಸವಾಲುಗಳ ನಡುವೆ ‘ಲಾಡಕಿ ಬಹೀಣ’ ಫಲಾನುಭವಿಗಳ ಸಂಖ್ಯೆಯನ್ನು ಮೊಟಕುಗೊಳಿಸಲು ಮಹಾರಾಷ್ಟ್ರದ ಚಿಂತನೆ
ಮುಂಬೈ: ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟದ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ‘ಲಾಡಕಿ ಬಹೀಣ’ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಮೊಟಕುಗೊಳಿಸಲು ರಾಜ್ಯದ ಅಧಿಕಾರಿಗಳು ಹವಣಿಸುತ್ತಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಜುಲೈ 2024ರಿಂದ ಮಾರ್ಚ್ 2025ರವರೆಗೆ ಬೊಕ್ಕಸಕ್ಕೆ 33,300 ಕೋಟಿ ರೂ.ಗಳ ಹೊರೆಯನ್ನುಂಟು ಮಾಡಲಿರುವ ಈ ಯೋಜನೆಯು ಹೆಚ್ಚಿನ ಮಹಿಳಾ ಮತದಾರರನ್ನು ಸೆಳೆದಿತ್ತು ಎಂದು ವ್ಯಾಪಕವಾಗಿ ನಂಬಲಾಗಿದೆ. ಈ ವರ್ಷದ ಜುಲೈನಲ್ಲಿ ಚಾಲನೆ ನೀಡಲಾಗಿದ್ದ ಈ ಯೋಜನೆಯು ಆರ್ಥಿಕವಾಗಿ ಹಿಂದುಳಿದ 18ರಿಂದ 65 ವರ್ಷ ವಯೋಮಾನದ ಮಹಿಳೆಯರಿಗೆ ಮಾಸಿಕ 1,500 ರೂ.ಗಳ ನೆರವನ್ನು ಒದಗಿಸುತ್ತಿದೆ. ಯೋಜನೆಯ ಜನಪ್ರಿಯತೆಯ ಹಿನ್ನೆಲೆಯಲ್ಲಿ ಮಹಾಯುತಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೊತ್ತವನ್ನು 2,100 ರೂ.ಗಳಿಗೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು.
ಈಗ ಚುನಾವಣೆಯ ಕಾವು ತಣ್ಣಗಾಗಿದೆ. ಆಡಳಿತ ಹೊಸದಾಗಿ ಆರಂಭವಾಗುತ್ತಿದ್ದು,2,100 ರೂ.ಗಳನ್ನು ನೀಡುವ ಭರವಸೆ ಆರ್ಥಿಕವಾಗಿ ಸಮರ್ಥನೀಯವಲ್ಲ ಎನ್ನುವುದನ್ನು ಅಧಿಕಾರಿಗಳು ಅರಿತುಕೊಂಡಿದ್ದಾರೆ. ಫಲಾನುಭವಿಗಳ ಪಟ್ಟಿಯಲ್ಲಿ ಹಲವಾರು ಅನರ್ಹರು ಸೇರಿಕೊಂಡಿದ್ದಾರೆ, ಹೀಗಾಗಿ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸುವುದು ಮೊದಲ ಹೆಜ್ಜೆಯಾಗಲಿದೆ. ಯೋಜನೆಯು ಪ್ರಸ್ತುತ ರೂಪದಲ್ಲಿಯೇ ಮುಂದುವರಿದರೆ ರಾಜ್ಯದ ಹಣಕಾಸುಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ ಎಂದು ಮಂತ್ರಾಲಯದ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ದೃಢಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆಯವರ ಪಕ್ಕದಲ್ಲಿಯೇ ಆಸೀನರಾಗಿದ್ದ ವಿತ್ತಸಚಿವ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಆರ್ಥಿಕ ಶಿಸ್ತಿನ ಅಗತ್ಯಕ್ಕೆ ಕರೆ ನೀಡುವ ಮೂಲಕ ಈ ಬಗ್ಗೆ ಸುಳಿವು ನೀಡಿದ್ದರು.
ಮಹಾಯುತಿಯ ಮತಗಳ ಪಾಲು ಏರಿಕೆಯಾಗಿದ್ದಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಚಲಾಯಿಸಿದ್ದು ಕಾರಣವಾಗಿದೆ. ಲಾಡಕಿ ಬಹೀಣ ಯೋಜನೆಯಿಂದ ಅವರು ಖುಷಿಯಾಗಿದ್ದಾರೆ ಎಂದು ಶಿವಸೇನಾ ವಕ್ತಾರ ಕೃಷ್ಣ ಹೆಗ್ಡೆ ಹೇಳಿದರು. ಲಾಡಕಿ ಬಹೀಣ ಯೋಜನೆಯು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮಾಡಿತ್ತು ಎಂದು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರೂ ರವಿವಾರ ಒಪ್ಪಿಕೊಂಡಿದ್ದಾರೆ.
ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಅವರು ನೂತನ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡ ಬೆನ್ನಿಗೇ ಯೋಜನೆಯ ಪರಿಷ್ಕರಣೆಯ ಪ್ರಸ್ತಾವವನ್ನು ಅವರ ಮುಂದಿರಿಸಲಿದ್ದಾರೆ ಎಂದು ಹೇಳಲಾಗಿದೆ.
2024-25ನೇ ವಿತ್ತವರ್ಷದಲ್ಲಿ ರಾಜ್ಯದ ಸಾಲದ ಹೊರೆ 7.82 ಲಕ್ಷ ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ. ರೈತರ ವಿದ್ಯುತ್ ಬಿಲ್ ಮನ್ನಾ ಮತ್ತು 60 ಲ.ಕುಟುಂಬಗಳಿಗೆ ವಾರ್ಷಿಕ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆ ಇವು ಸರಕಾರವು ಪರಿಚಯಿಸಿರುವ ಇತರ ಯೋಜನೆಗಳಾಗಿವೆ.
ಲಾಡಕಿ ಬಹೀಣ ಯೋಜನೆಯನ್ನು ಜಾರಿಗೊಳಿಸಿದಾಗ ಹಣಕಾಸು ಇಲಾಖೆಯು 2.50 ಲ.ಫಲಾನುಭವಿಗಳನ್ನು ಅಂದಾಜಿಸಿದ್ದು,ಅದೀಗ 2.43 ಕೋಟಿಯಷ್ಟಿದೆ.
ಆಧಾರ್ ಜೋಡಣೆ ಅಪೂರ್ಣವಾಗಿರುವುದರಿಂದ ಮತ್ತು ಕೆಂಪು ಅಥವಾ ಕಿತ್ತಳೆ ಬಣ್ಣದ ಪಡಿತರ ಕಾರ್ಡ್‌ಗಳನ್ನು ಹೊಂದಿರದ್ದರಿಂದ ಪಟ್ಟಿಯಲ್ಲಿನ ಸುಮಾರು ಒಂದು ಕೋ.ಮಹಿಳೆಯರು ಅನರ್ಹರಾಗಿದ್ದಾರೆ ಎಂದು ವಿತ್ತ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದರು.
ಯೋಜನೆಯು ಮುಂದುವರಿದರೆ ಜನವರಿ ತಿಂಗಳ ವೇತನಗಳನ್ನು ಪಾವತಿಸುವುದು ಸವಾಲಾಗಲಿದೆ ಎಂದು ವಿತ್ತ ಇಲಾಖೆಯ ಅಧಿಕಾರಿಗಳು ಈ ಹಿಂದೆ ಎಚ್ಚರಿಕೆಯ ಗಂಟೆ ಮೊಳಗಿಸಿದ್ದರು.
ಈ ನಡುವೆ,ಮುಂದಿನ ವರ್ಷ ನಡೆಯಲಿರುವ ನಗರ ಸಂಸ್ಥೆಗಳ ಚುನಾವಣೆಗಳ ಮೇಲೆ ಕಣ್ಣಿರಿಸಿರುವ ಆಡಳಿತ ಮೈತ್ರಿಕೂಟವು ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಮೊಟಕುಗೊಳಿಸಲು ಹಿಂದೇಟು ಹಾಕುತ್ತಿದೆ. ಯಾವುದೇ ಪರಿಷ್ಕರಣೆಯನ್ನು ಚುನಾವಣೆಗಳ ಬಳಿಕವೇ ಮಾಡಲಾಗುವುದು ಎಂದು ಶಿವಸೇನೆ ಶಾಸಕರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.