ದಿಲ್ಲಿ ವಿಶ್ವವಿದ್ಯಾಲಯ ಚುನಾವಣೆಯಲ್ಲಿ ಮಿಶ್ರ ಫಲಿತಾಂಶ: NSUI ಹಾಗೂ ಎಬಿವಿಪಿಗೆ ತಲಾ ಎರಡು ಸ್ಥಾನ

Update: 2024-11-25 13:17 GMT

PC : ANI 

ಹೊಸ ದಿಲ್ಲಿ: ನಿಕಟ ಪೈಪೋಟಿಗೆ ಸಾಕ್ಷಿಯಾದ ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ(DUSU)ಯ ಚುನಾವಣೆಯಲ್ಲಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ತಲಾ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

NSUI ಅಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡರೆ, ಎಬಿವಿಪಿ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಹುದ್ದೆಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.

NSUI ನ ರೌನಕ್ ಖತ್ರಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ಚುನಾಯಿತರಾಗಿದ್ದರೆ, ಲೋಕೇಶ್ ಚೌಧರಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಎಬಿವಿಪಿಯ ಭಾನು ಪ್ರತಾಪ್ ಸಿಂಗ್ ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದ್ದರೆ, ಮಿತ್ರವಿಂದ ಕರಣ್ ವಾಲ್ ಕಾರ್ಯದರ್ಶಿಯಾಗಿ ಜಯ ಸಾಧಿಸಿದ್ದಾರೆ.

ಚುನಾವಣೆ ಸಂಬಂಧಿ ತಕರಾರು ಅರ್ಜಿ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್ ಫಲಿತಾಂಶ ಪ್ರಕಟಣೆಗೆ ತಡೆ ನೀಡಿದ್ದರಿಂದ ಫಲಿತಾಂಶ ಎರಡು ತಿಂಗಳಷ್ಟು ತಡವಾಗಿ ಪ್ರಕಟಗೊಂಡಿದೆ. ಭಾರಿ ಭದ್ರತೆಯೊಂದಿಗೆ ಇಂದು ಬೆಳಗ್ಗೆ ದಿಲ್ಲಿ ವಿಶ್ವವಿದ್ಯಾಲಯದ ನಾರ್ತ್ ಕ್ಯಾಂಪಸ್ ನಲ್ಲಿ ಮತ ಎಣಿಕೆ ಪ್ರಾರಂಭಗೊಂಡಿತು.

ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ದಿಲ್ಲಿ ಪೊಲೀಸರು ಮತ ಎಣಿಕೆ ಕೇಂದ್ರದ ಸುತ್ತ ಮೂರು ಹಂತದ ತಡೆಗೋಡೆಗಳನ್ನು ನಿರ್ಮಿಸಿದ್ದರು. ಚುನಾವಣೆಯ ನಂತರ ವಿಶ್ವವಿದ್ಯಾಲಯದ ಆವರಣದಲ್ಲಿ ವಿಜಯೋತ್ಸವ ಆಚರಣೆಯನ್ನು ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿತ್ತು.

ವಿಶ್ವವಿದ್ಯಾಲಯ ಆವರಣದ ಸೌಂದರ್ಯವನ್ನು ವಿರೂಪಗೊಳಿಸಬಾರದು ಎಂದು ಹೈಕೋರ್ಟ್ ನಿರ್ದೇಶನ ನೀಡಿದ್ದರೂ, ಆವರಣದ ರಸ್ತೆಗಳಾದ್ಯಂತ ಪ್ರಚಾರ ಭಿತ್ತಿಪತ್ರಗಳು ಹಾಗೂ ಕರಪತ್ರಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿತ್ತು.

ಸದ್ಯ, ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಂಘಟನೆಯಲ್ಲಿ ಎಬಿವಿಪಿ ಬಹುಮತ ಹೊಂದಿದ್ದರೂ, ಈ ವರ್ಷದ ಚುನಾವಣಾ ಫಲಿತಾಂಶದಿಂದ ಅಧಿಕಾರ ಹಂಚಿಕೆಯಲ್ಲಿ ಕೊಂಚ ಏರುಪೇರಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News