ಲಂಚದ ಆರೋಪದ ಬೆನ್ನಲ್ಲೇ ಅದಾನಿ ಸಮೂಹದ 100 ಕೋಟಿ ರೂ. ದೇಣಿಗೆ ತಿರಸ್ಕರಿಸಿದ ತೆಲಂಗಾಣ ಸರಕಾರ

Update: 2024-11-25 12:22 GMT

ರೇವಂತ್ ರೆಡ್ಡಿ , ಗೌತಮ್ ಅದಾನಿ | PC : indiatoday.in

ತೆಲಂಗಾಣ: ಗೌತಮ್ ಅದಾನಿ ವಿರುದ್ಧ ಲಂಚದ ಆರೋಪ ಕೇಳಿ ಬಂದ ಬೆನ್ನಲ್ಲೇ ʼಯಂಗ್ ಇಂಡಿಯಾ ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯʼದ ಸ್ಥಾಪನೆಗಾಗಿ ಅದಾನಿ ಗ್ರೂಪ್ ನೀಡಲು ಉದ್ದೇಶಿಸಿದ 100 ಕೋಟಿ ರೂ. ದೇಣಿಗೆಯನ್ನು ಸ್ವೀಕರಿಸಲು ತೆಲಂಗಾಣ ಸರಕಾರ ನಿರಾಕರಿಸಿದೆ.

ಸೌರ ವಿದ್ಯುತ್ ಗುತ್ತಿಗೆ ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಇತರ ಏಳು ಮಂದಿ ವಿರುದ್ಧ ಯುಎಸ್ ಪ್ರಾಸಿಕ್ಯೂಟರ್‌ ಗಳು ದೋಷಾರೋಪಣೆ ಸಲ್ಲಿಕೆ ಮಾಡಿದ್ದರು.

ʼಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿʼ (Young India Skills University)ಗೆ ಅದಾನಿ ಸಮೂಹ ಸೇರಿದಂತೆ ಯಾವುದೇ ಸಂಸ್ಥೆಯಿಂದ ರಾಜ್ಯ ಸರ್ಕಾರ ಯಾವುದೇ ನಿಧಿ ಅಥವಾ ದೇಣಿಗೆಯನ್ನು ಈವರೆಗೆ ಸ್ವೀಕರಿಸಿಲ್ಲ. ವಿವಿಗೆ ಭರವಸೆ ನೀಡಿದ್ದ 100 ಕೋಟಿ ರೂ.ಗಳನ್ನು ಸ್ವೀಕರಿಸುವುದಿಲ್ಲ ಎಂದು ಸರ್ಕಾರ ನಿನ್ನೆ ಅದಾನಿ ಗ್ರೂಪ್‌ ಗೆ ಪತ್ರ ಬರೆದಿದೆ. ಅದಾನಿ ಗ್ರೂಪ್ನಿಂದ 100 ಕೋಟಿ ರೂ.ಗಳನ್ನು ಸ್ವೀಕರಿಸುವುದಿಲ್ಲ ಎಂಬ ರಾಜ್ಯ ಸರ್ಕಾರದ ನಿರ್ಧಾರವನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.

ಅಕ್ಟೋಬರ್ 18ರಂದು ಗೌತಮ್ ಅದಾನಿ ಅವರು ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿ ಸ್ಥಾಪನೆಗೆ ರೆಡ್ಡಿ ಅವರಿಗೆ 100 ಕೋಟಿ ರೂ.ದೇಣಿಗೆಯ ಚೆಕ್ ಅನ್ನು ನೀಡಿದ್ದರು. ಈ ಕುರಿತು ತೆಲಂಗಾಣ ಸರಕಾರದ ಉನ್ನತ ಅಧಿಕಾರಿಗಳು ಅದಾನಿ ಫೌಂಡೇಶನ್ ನ ಅಧ್ಯಕ್ಷೆ ಡಾ.ಪ್ರೀತಿ ಅದಾನಿ ಅವರಿಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ಉದ್ಭವಿಸಿರುವ ವಿವಾದಗಳನ್ನು ಗಮನದಲ್ಲಿಟ್ಟುಕೊಂಡು ಹಣ ವರ್ಗಾವಣೆ ಮಾಡದಂತೆ ಮುಖ್ಯಮಂತ್ರಿಗಳು ನನಗೆ ಸೂಚಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News