ಆಂಧ್ರಪ್ರದೇಶ | ಮನೆ ಬಾಗಿಲಿಗೆ ಪಾರ್ಸೆಲ್ ಬಂದ ಅಪರಿಚಿತ ವ್ಯಕ್ತಿಯ ಮೃತದೇಹ!
ಅಮರಾವತಿ: ಪಶ್ಚಿಮ ಗೋದಾವರಿ ಜಿಲ್ಲೆಯ ಮಹಿಳೆಯೊಬ್ಬರು ಅಪರಿಚಿತ ವ್ಯಕ್ತಿಯ ಮೃತದೇಹದ ಪಾರ್ಸೆಲ್ ಸ್ವೀಕರಿಸಿದ್ದು, ಅದರೊಂದಿಗೆ 1.30 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಪತ್ರವನ್ನೂ ಸ್ವೀಕರಿಸಿದ್ದಾರೆ.
ಈ ಭಯಾನಕ ಘಟನೆಯು ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲ್ ನ ಯೆಂದಗಂದಿ ಗ್ರಾಮದಿಂದ ವರದಿಯಾಗಿದೆ.
ನಾಗ ತುಳಸಿ ಎಂದು ಗುರುತಿಸಲಾಗಿರುವ ಮಹಿಳೆಯು, ಮನೆ ನಿರ್ಮಿಸಲು ತನಗೆ ಹಣಕಾಸು ನೆರವು ಒದಗಿಸುವಂತೆ ಕ್ಷತ್ರಿಯ ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಸಮಿತಿಯು ಮಹಿಳೆಗೆ ಟೈಲ್ಸ್ ಅನ್ನು ಕಳಿಸಿಕೊಟ್ಟಿತ್ತು.
ಮನೆ ನಿರ್ಮಾಣಕ್ಕೆ ಮತ್ತಷ್ಟು ನೆರವು ನೀಡುವಂತೆ ಸದರಿ ಮಹಿಳೆಯು ಮತ್ತೊಮ್ಮೆ ಕ್ಷತ್ರಿಯ ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ, ಮಹಿಳೆಗೆ ವಿದ್ಯುತ್ ಉಪಕರಣಗಳನ್ನು ಪೂರೈಸುವ ಭರವಸೆಯನ್ನು ಸಮಿತಿ ನೀಡಿತ್ತು. ನಂತರ, ವಿದ್ಯುತ್ ದೀಪಗಳು, ಫ್ಯಾನ್ ಗಳು ಹಾಗೂ ಸ್ವಿಚ್ ಗಳಂತಹ ವಿದ್ಯುತ್ ಉಪಕರಣಗಳನ್ನು ರವಾನಿಸಲಾಗಿದೆ ಎಂಬ ವಾಟ್ಸ್ ಆ್ಯಪ್ ಸಂದೇಶವನ್ನು ಆ ಮಹಿಳೆ ಸ್ವೀಕರಿಸಿದ್ದರು.
ಗುರುವಾರ ರಾತ್ರಿ ಪಾರ್ಸೆಲ್ ಒಂದನ್ನು ಮಹಿಳೆಯ ಮನೆ ಬಾಗಿಲಿಗೆ ತಲುಪಿಸಿರುವ ವ್ಯಕ್ತಿಯೊಬ್ಬ, ಆ ಪಾರ್ಸೆಲ್ ಬಾಕ್ಸ್ ನಲ್ಲಿ ವಿದ್ಯುತ್ ಉಪಕರಣಗಳಿವೆ ಎಂದು ಆಕೆಗೆ ಮಾಹಿತಿ ನೀಡಿ, ಅಲ್ಲಿಂದ ತೆರಳಿದ್ದಾನೆ. ಅದರಂತೆ, ಮಹಿಳೆಯು ಆ ಪಾರ್ಸೆಲ್ ಬಾಕ್ಸ್ ಅನ್ನು ತೆರೆದಾಗ, ಬಾಕ್ಸ್ ನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಇರುವುದನ್ನು ಕಂಡು ಆಘಾತಕ್ಕೀಡಾಗಿದ್ದಾರೆ. ಆಕೆಯ ಕುಟುಂಬದ ಸದಸ್ಯರೂ ಅದನ್ನು ಕಂಡು ಭೀತರಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ನಂತರ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದ್ನಾನ್ ನಯೀಂ ಅಸ್ಮಿ ಕೂಡಾ ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ.
ಪಾರ್ಸೆಲ್ ಬಾಕ್ಸ್ ನಲ್ಲಿ 1.30 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಪತ್ರವೊಂದು ಕಂಡು ಬಂದಿದ್ದು, ಒಂದು ವೇಳೆ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆ ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ.
ಮಹಿಳೆಗೆ ಪಾರ್ಸೆಲ್ ಅನ್ನು ಪೂರೈಸಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಕ್ಷತ್ರಿಯ ಸೇವಾ ಸಮಿತಿಯ ಪ್ರತಿನಿಧಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.