ಡಾ. ಬಿ.ಆರ್.ಅಂಬೇಡ್ಕರ್ ಗೆ ಅವಮಾನ ಪ್ರಕರಣ | ಡಿ.23ರಂದು ಬಿಜೆಪಿ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ : ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಪ್ರತಿಭಟಿಸಿ ಡಿಸೆಂಬರ್ 23ರಂದು ಪಶ್ಚಿಮ ಬಂಗಾಳದಾದ್ಯಂತ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.
ಮಂಗಳವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರನ್ನುದ್ದೇಶಿಸಿ, “ಇತ್ತೀಚೆಗೆ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಶೋಕಿಯಾಗಿ ಹೋಗಿದೆ. ಇಷ್ಟು ಬಾರಿ ನೀವು ದೇವರ ಹೆಸರನ್ನು ಸ್ಮರಿಸಿದ್ದರೆ, ನಿಮಗೆ ಏಳು ಜನ್ಮಗಳ ಸ್ವರ್ಗವಾದರೂ ಪ್ರಾಪ್ತಿಯಾಗಿರುತ್ತಿತ್ತು” ಎಂದು ಅಮಿತ್ ಶಾ ಅಣಕಿಸಿದ್ದರು.
ಅಮಿತ್ ಶಾರ ಈ ಹೇಳಿಕೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದವು. ಅವರ ಹೇಳಿಕೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳೂ ಭುಗಿಲೆದ್ದಿವೆ. ಇದರ ಬೆನ್ನಿಗೇ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಬಿಜೆಪಿ ವಿರುದ್ಧ ಪ್ರತಿಭಟನೆಗೆ ಕರೆ ನೀಡುವ ಮೂಲಕ ಉಳಿದ ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿದ್ದಾರೆ.