ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲು ಕೇಂದ್ರ ಸರಕಾರದ ಹತಾಶೆಯ ಪ್ರತೀಕ : ಪ್ರಿಯಾಂಕಾ
ಹೊಸದಿಲ್ಲಿ : ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಕೇಂದ್ರ ಸರಕಾರದ ಹತಾಶೆಯ ಪ್ರತೀಕ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಹೇಳಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವನ್ನು ಈ ದೇಶ ಸಹಿಸಲಾರದು ಎಂಬುದು ಬಿಜೆಪಿಗೆ ತಿಳಿದಿದೆ. ಆದುದರಿಂದ ಅದು ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಂಬೇಡ್ಕರ್ ಅವರ ಬಗ್ಗೆ ತನ್ನ ನಿಜವಾದ ಭಾವನೆಗಳು ಬಹಿರಂಗವಾಗಿದೆ ಎಂದು ಬಿಜೆಪಿಗೆ ತಿಳಿದಿದೆ. ಆದುದರಿಂದ ಅದು ಈ ವಿಷಯದ ಬಗ್ಗೆ ಧ್ವನಿ ಎತ್ತುತ್ತಿರುವ ಪ್ರತಿಪಕ್ಷದ ಬಗ್ಗೆ ಹೆದರುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
‘‘ಈ ಸರಕಾರ ಹೆದರಿದೆ. ಈ ಸರಕಾರ ಅದಾನಿ ವಿಷಯದ ಕುರಿತು ಚರ್ಚೆಗೆ ಹೆದರಿದೆ. ಅವರು ಯಾವುದೇ ಚರ್ಚೆಗೆ ಹೆದರಿದ್ದಾರೆ. ಅಂಬೇಡ್ಕರ್ ಬಗೆಗಿನ ತಮ್ಮ ನಿಜವಾದ ಭಾವನೆ ಬಹಿರಂಗವಾಗಿದೆ ಎಂದು ಅವರಿಗೆ ತಿಳಿದಿದೆ. ಆದುದರಿಂದಲೇ ಅವರು ಪ್ರತಿಪಕ್ಷಕ್ಕೆ ಹೆದರಿದ್ದಾರೆ. ಯಾಕೆಂದರೆ, ನಾವು ಆ ವಿಷಯದ ಕುರಿತು ಧ್ವನಿ ಎತ್ತುತ್ತೇವೆ’’ ಎಂದು ಸಂಸತ್ತಿನ ಆವರಣದಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು.
ಅಂಬೇಡ್ಕರ್ ನೀಡಿದ ನಮ್ಮ ಸಂವಿಧಾನ, ದೇಶದ ಜನರು, ಸ್ವಾತಂತ್ರ್ಯ ಹೋರಾಟ ಹಾಗೂ ದೇಶ ಈ ಅಪಮಾನವನ್ನು ಸಹಿಸಲಾರದು ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಕುರಿತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಸರಕಾರದ ಹತಾಶೆಯ ಪ್ರತೀಕ. ಅವರು ಎಷ್ಟು ಹತಾಶರಾಗಿದ್ದಾರೆಂದರೆ, ಸುಳ್ಳು ಎಫ್‌ಐಆರ್ ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಯಾರನ್ನೂ ಎಂದಿಗೂ ತಳ್ಳಲು ಸಾಧ್ಯವಿಲ್ಲ. ನಾನು ಅವರ ತಂಗಿ. ಅವರ ಬಗ್ಗೆ ನನಗೆ ಗೊತ್ತು. ಅವರು ಎಂದಿಗೂ ಹಾಗೆ ಮಾಡಲಾರರು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.