ಮುಸ್ಲಿಮ್ ವಿರೋಧಿ ದ್ವೇಷ ಭಾಷಣ | ಮೂರು ರಾಜ್ಯಗಳಲ್ಲಿ ನರಸಿಂಹಾನಂದ ವಿರುದ್ಧ ಎಫ್ಐಆರ್ ದಾಖಲು

Update: 2024-10-06 15:49 GMT

ನರಸಿಂಹಾನಂದ | PC : PTI 

ಹೊಸದಿಲ್ಲಿ : ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಹಿಂದುತ್ವವಾದಿ ಯತಿ ನರಸಿಂಹಾನಂದ ಗಿರಿ ವಿರುದ್ಧ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣಗಳಲ್ಲಿ ಎಫ್ಐಆರ್ ಗಳು ದಾಖಲಾಗಿವೆ.

ಉತ್ತರ ಪ್ರದೇಶದ ಗಾಝಿಯಾಬಾದ್ ನ ದಾಸ್ನಾದೇವಿ ದೇವಸ್ಥಾನದ ಅರ್ಚಕ ನರಸಿಂಹಾನಂದ ಸೆ.29ರಂದು ಪ್ರವಚನ ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದರ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದ ಆರೋಪ ಎದುರಿಸುತ್ತಿದ್ದಾರೆ.

ನರಸಿಂಹಾನಂದರ ಪ್ರವಚನದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಉತ್ತರ ಪ್ರದೇಶ, ಜಮ್ಮುಕಾಶ್ಮೀರ, ಮಹಾರಾಷ್ಟ್ರ ಮತ್ತು ತೆಲಂಗಾಣಗಳ ಹಲವಾರು ನಗರಗಳಲ್ಲಿ ಮುಸ್ಲಿಮ್ ಗುಂಪುಗಳು ಪ್ರತಿಭಟನೆಗಳನ್ನು ನಡೆಸಿದ್ದವು.

ರವಿವಾರ ಎಸ್ ಡಿ ಪಿ ಐ ದೂರಿನ ಮೇರೆಗೆ ಮಹಾರಾಷ್ಟ್ರದ ಥಾಣೆ ಪೋಲಿಸರು ನರಸಿಂಹಾನಂದ ವಿರುದ್ಧ ಪ್ರಕರಣ ದಾಖಲಿಸಿದ್ದರೆ, ಶನಿವಾರ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿಯವರ ದೂರಿನ ಮೇರೆಗೆ ಹೈದರಾಬಾದ್ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಶುಕ್ರವಾರ ಘಾಝಿಯಾಬಾದ್ ಮತ್ತು ಮಹಾರಾಷ್ಟ್ರದ ಅಮರಾವತಿಯಲ್ಲಿ ನರಸಿಂಹಾನಂದ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಜಮ್ಮುಕಾಶ್ಮೀರದಲ್ಲಿಯೂ ಹಲವಾರು ರಾಜಕೀಯ ಮತ್ತು ಧಾರ್ಮಿಕ ಮುಖಂಡರು ನರಸಿಂಹಾನಂದ ಬಂಧನಕ್ಕೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News