ಬಿಜೆಪಿ ಸರಕಾರದ ವಿರುದ್ಧ ಲೇಖನ: ಮಣಿಪುರದ ಪತ್ರಕರ್ತನ ಬಂಧನ
ಇಂಫಾಲ: ರಾಜ್ಯದಲ್ಲಿ ಸಮುದಾಯಗಳ ನಡುವೆ ಹಿಂಸಾಚಾರವನ್ನು ಉತ್ತೇಜಿಸುತ್ತಿರುವ ಆರೋಪದಲ್ಲಿ ಪತ್ರಕರ್ತ ವಾಂಗ್ಖೆಮೆಚಾ ಶ್ಯಾಮ್ಜೈ ಅವರನ್ನು ಮಣಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಣಿಪುರ ಬಿಜೆಪಿ ಉಪಾಧ್ಯಕ್ಷ ಲೈಶಾರಾಮ್ ಮೀನಾಬಂಟಾ ಸಿಂಗ್ ಅವರು ನೀಡಿದ ದೂರಿನ ಮೇರೆಗೆ ಸ್ಥಳೀಯ ಸುದ್ದಿಪತ್ರಿಕೆ ‘ಕಾಂಗ್ಲೆಯಿಪಾಕ್ಕಿ ಮಿಯೆರಾ’ದ ಸಂಪಾದಕರಾದ ಶ್ಯಾಮ್ಜೈ ವಿರುದ್ಧ ಮಣಿಪುರ ಪೊಲೀಸರು ಡಿಸೆಂಬರ್ 2ರಂದು ಪ್ರಕರಣ ದಾಖಲಿಸಿದ್ದರು.
‘ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಕುಕಿ ಉಗ್ರರ ಬೆಂಬಲವಿದೆಯೇ’ ಎಂದು ಪ್ರಶ್ನಿಸುವ ಲೇಖನದ ಕುರಿತಾಗಿ ಶ್ಯಾಮ್ಜೈ ವಿರುದ್ಧ ದೂರು ದಾಖಲಾಗಿತ್ತು.
ಶ್ಯಾಮ್ಜೈ ಅವರ ಲೇಖನವು ಮಣಿಪುರದಲ್ಲಿ ಸಮುದಾಯಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆಯೆಂದು ಲೈಶಾರಾಮ್ ಮೀನಾಬಂಟಾ ಸಿಂಗ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆಪಾದಿಸಿದ್ದರು.
ಪತ್ರಕರ್ತ ಶ್ಯಾಮ್ಜೈ ವಿರುದ್ಧ ಮಣಿಪುರ ಪೊಲೀಸರು ಗಲಭೆಗಳನ್ನು ಸೃಷ್ಟಿಸುವ ಉದ್ದೇಶ, ವಿವಿಧ ಸಮುದಾಯಗಳ ನಡುವೆ ಶತ್ರುತ್ವಕ್ಕೆ ಪ್ರಚೋದನೆ, ಕ್ರಿಮಿನಲ್ ಬೆದರಿಕೆ ಹಾಗೂ ಸಾರ್ವನಿಕ ಕಿಡಿಗೇಡಿತನವನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡಿದ ಆರೋಪಗಳಿಗೆ ಸಂಬಂಧಿಸಿ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ
ಶ್ಯಾಮ್ಜೈ ಅವರ ಬಂಧನವನ್ನು ಕಾಂಗ್ರೆಸ್ ಬಲವಾಗಿ ಖಂಡಿಸಿದ್ದು, ‘‘ಮಾಧ್ಯಮ ಹಾಗೂ ವಾಕ್ ಸ್ವಾತಂತ್ರ್ಯಕ್ಕೆ ಅನ್ಯಾಯವಾಗಿರುವುದಕ್ಕೆ ಜೀವಂತ ಉದಾಹರಣೆ ಇದಾಗಿದೆ ’’ ಎಂದು ಹೇಳಿದೆ.
ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿ ಮೇ ತಿಂಗಳಿನಿಂದೀಚೆಗೆ ಮೈತೈ ಹಾಗೂ ಕುಕಿ ಪಂಗಡಗಳ ನಡುವೆ ಭುಗಿಲೆದ್ದಿರುವ ಹಿಂಸಾಚಾರದಲ್ಲಿ 175ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ 60 ಸಾವಿರಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.