"ನಾನು ಭಯೋತ್ಪಾದಕನಲ್ಲ": ತಿಹಾರ್ ಜೈಲಿನಿಂದ ಅರವಿಂದ್ ಕೇಜ್ರಿವಾಲ್ ಹೊಸ ಸಂದೇಶ
ಹೊಸದಿಲ್ಲಿ: ‘ನನ್ನ ಹೆಸರು ಅರವಿಂದ್ ಕೇಜ್ರಿವಾಲ್ ಹಾಗೂ ನಾನು ಭಯೋತ್ಪಾದಕನಲ್ಲ’ ಎಂದು ತಿಹಾರ್ ಜೈಲಿನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊಸದಾಗಿ ಸಂದೇಶ ಕಳಿಸಿದ್ದಾರೆ ಎಂದು ಮಂಗಳವಾರ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ತಿಳಿಸಿದ್ದಾರೆ.
ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೀಡಾಗಿ, ಇದೀಗ ತಿಹಾರ್ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಲು ದಿನದ 24 ಗಂಟೆಯೂ ಪ್ರಯತ್ನಿಸಲಾಗುತ್ತಿದೆ ಎಂದು ಸಂಜಯ್ ಸಿಂಗ್ ಆರೋಪಿಸಿದ್ದಾರೆ.
“ಅವರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗುತ್ತಿದೆ. ಅವರು ತಮ್ಮ ಆಪ್ತರನ್ನು ಸಮರ್ಪಕವಾಗಿ ಭೇಟಿ ಮಾಡಲು ಸಾಧ್ಯದವಾಗುತ್ತಿಲ್ಲ. ಇದು ಸ್ಪಷ್ಟವಾಗಿ ಪ್ರತೀಕಾರದ ರಾಜಕಾರಣ. ಅರವಿಂದ್ ಕೇಜ್ರಿವಾಲ್ ಮತ್ತಷ್ಟು ಸದೃಢವಾಗಿ ಜೈಲಿನಿಂದ ಹೊರಬರಲಿದ್ದಾರೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿದ್ದ ಸಂಜಯ್ ಸಿಂಗ್ ಎಪ್ರಿಲ್ 4ರಂದು ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದರು.