ಮೃತ ಸ್ನೇಹಿತನ ಪುತ್ರಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ದಿಲ್ಲಿ ಅಧಿಕಾರಿಯ ಅಮಾನತಿಗೆ ಕೇಜ್ರಿವಾಲ್‌ ಆದೇಶ

Update: 2023-08-21 10:08 GMT

 ಪ್ರೇಮೋದಯ್‌ ಖಾಖಾ (Photo: NDTV)

ಹೊಸದಿಲ್ಲಿ: ತನ್ನ ಸ್ನೇಹಿತನ 14 ವರ್ಷ ಪ್ರಾಯದ ಮಗಳ ಮೇಲೆ ಹಲವು ತಿಂಗಳುಗಳ ಕಾಲ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ದಿಲ್ಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮೋದಯ್‌ ಖಾಖಾ ಅವರನ್ನು ಅಮಾನತುಗೊಳಿಸಲು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆದೇಶಿಸಿದ್ದಾರೆ. ಈ ಪ್ರಕರಣದ ಕುರಿತು ಮುಖ್ಯ ಕಾರ್ಯದರ್ಶಿಗಳಿಂದ ಇಂದು ಸಂಜೆ 5 ಗಂಟೆಯೊಳಗೆ ವರದಿಯನ್ನೂ ಮುಖ್ಯಮಂತ್ರಿ ಕೇಳಿದ್ದಾರೆ.

“ಅಧಿಕಾರಿ ಗಂಭೀರ ಕೃತ್ಯವೆಸಗಿದ್ಧಾರೆ. ಅವರ ಪತ್ನಿ ಕೂಡ ಈ ಅಪರಾಧಕ್ಕೆ ಸಹಕರಿಸಿದ್ದಾರೆ., ಈ ಘಟನೆ ಸಮಾಜದಲ್ಲಿ ಆತಂಕ ಸೃಷ್ಟಿಸಿದೆ. ಹಿಂದೆಯೇ ಕ್ರಮ ಕೈಗೊಳ್ಳಬೇಕಿತ್ತು, ಈಗ ಮುಖ್ಯಮಂತ್ರಿ ಅಧಿಕಾರಿಯ ಅಮಾನತಿಗೆ ಆದೇಶಿಸಿದ್ದಾರೆ. ಈ ಆರೋಪಿ ಅಧಿಕಾರಿಯನ್ನು ಬಂಧಿಸಲು ದಿಲ್ಲಿ ಪೊಲೀಸರ ವೈಫಲ್ಯ ಆಘಾತಕಾರಿ. ಅಧಿಕಾರಿಗೆ ಕಠಿಣ ಶಿಕ್ಷೆಯಾಗಬೇಕು,”ಎಂದು ಆಪ್‌ ನಾಯಕ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

ಸಂತ್ರಸ್ತೆಯ ದೂರಿನ ಪ್ರಕಾರ ಆರೋಪಿ ಅಧಿಕಾರಿ ಆಕೆಯನ್ನು ಮೊದಲ ಬಾರಿಗೆ ಚರ್ಚಿನಲ್ಲಿ ಭೇಟಿಯಾಗಿದ್ದರು. 2020ರಲ್ಲಿ ಸಂತ್ರಸ್ತೆ ತನ್ನ ತಂದೆಯ ಸಾವಿನ ದುಃಖದಲ್ಲಿದ್ದಾಗ ಅವರು ಮತ್ತೆ ಭೇಟಿಯಾದರು. ಆಕೆಯ ತಂದೆ ಅಕ್ಟೋಬರ್‌ 1, 2020ರಂದು ಸಾವನ್ನಪ್ಪಿದಂದಿನಿಂದ ಬಾಲಕಿ ಆರೋಪಿ ಮತ್ತಾತನ ಕುಟುಂಬದೊಂದಿಗೆ ಅವರ ಮನೆಯಲ್ಲಿ ವಾಸವಾಗಿದ್ದಳು.

ಆರೋಪಿ ಅಧಿಕಾರಿ ಬಾಲಕಿಯ ಮೇಲೆ ನವೆಂಬರ್‌ 2020 ಹಾಗೂ ಜನವರಿ 2021ರ ನಡುವೆ ಹಲವು ಬಾರಿ ಅತ್ಯಾಚಾರವೆಸಗಿದ್ದ. ಬಾಲಕಿ ಗರ್ಭ ಧರಿಸಿದಾಗ ಆರೋಪಿಯ ಪತ್ನಿಗೆ ತಿಳಿಸಿದಾಗ ಆಕೆ ಬಾಲಕಿಗೆ ಗರ್ಭಪಾತವಾಗಲು ಔಷಧಿಗಳನ್ನೂ ನೀಡಿದ್ದಳು ಎಂದು ದೂರಲಾಗಿದೆ.

ಕೆಲ ತಿಂಗಳ ಹಿಂದೆ ಮಾನಸಿಕ ಸಮಸ್ಯೆಗಾಗಿ ಆಕೆ ಆಸ್ಪತ್ರೆಯೊಂದರಲ್ಲಿ ಕೌನ್ಸೆಲರ್‌ ಬಳಿ ಸಮಾಲೋಚನೆ ನಡೆಸುತ್ತಿದ್ದಾಗ ಈಗ 12ನೇ ತರಗತಿಯಲ್ಲಿರುವ ಬಾಲಕಿ ತನ್ನ ಮೇಲಾದ ದೌರ್ಜನ್ಯವನ್ನು ವಿವರಿಸಿದ್ದಳು. ಜನವರಿ 2021ರಿಂದ ಆಕೆ ತನ್ನ ತಾಯಿಯ ಜೊತೆ ವಾಸಿಸುತ್ತಿದ್ದಾಳೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News