ಟಿಟಿಡಿ ಮುಖ್ಯಸ್ಥರ ‘ಹಿಂದೂ ಉದ್ಯೋಗಿಗಳು ಮಾತ್ರ’ ಹೇಳಿಕೆ ವಿವಾದ | ಪ್ರಧಾನಿ ಮೋದಿ ವಿರುದ್ಧ ಸಂಸದ ಉವೈಸಿ ವಾಗ್ದಾಳಿ
ಹೈದರಾಬಾದ್: ತಿರುಪತಿ ಆವರಣದಲ್ಲಿ ಹಿಂದೂ ಉದ್ಯೋಗಿಗಳಿಗೆ ಮಾತ್ರ ಕೆಲಸ ನಿರ್ವಹಿಸಲು ಅವಕಾಶ ಎಂಬ ಟಿಟಿಡಿ ಮುಖ್ಯಸ್ಥರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಉವೈಸಿ, “ನೀವು ಹಿಂದೂ ಉದ್ಯೋಗಿಗಳಿಗೆ ಮಾತ್ರ ಅವಕಾಶ ಎಂದು ಹೇಳುತ್ತಿದ್ದೀರಿ; ಆದರೆ, ಪ್ರಧಾನಿ ನರೇಂದ್ರ ಮೋದಿ ವಕ್ಫ್ ಮಂಡಳಿಗೆ ಮುಸ್ಲಿಮೇತರರನ್ನು ಸೇರ್ಪಡೆ ಮಾಡಲು ಬಯಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಸದುದ್ದೀನ್ ಉವೈಸಿ, “ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯ 24 ಮಂದಿ ಸದಸ್ಯರ ಪೈಕಿ ಒಬ್ಬರೂ ಹಿಂದೂಯೇತರರಿಲ್ಲ. ಅಲ್ಲಿ ಕೆಲಸ ಮಾಡುವವರು ಹಿಂದೂಗಳೇ ಆಗಿರಬೇಕು ಎಂದು ತಿರುಮಲ ತಿರುಪತಿ ದೇವಸ್ಥಾನಂ ಹೇಳುತ್ತಿದೆ. ನಾವು ಇದರ ವಿರುದ್ಧವಿಲ್ಲ. ಆದರೆ, ನರೇಂದ್ರ ಮೋದಿ ಸರಕಾರವು ಕೇಂದ್ರ ವಕ್ಫ್ ಮಂಡಳಿಯಲ್ಲಿ ಕಡ್ಡಾಯವಾಗಿ ಇಬ್ಬರು ಮುಸ್ಲಿಮೇತರ ಸದಸ್ಯರಿರಬೇಕು ಎಂದು ತನ್ನ ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಹೇಳಿದೆ. ನೀವು ಈ ನಿಯಮವನ್ನು ವಕ್ಫ್ ಮಸೂದೆಗೆ ಏಕೆ ತರುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
“ತಿರುಮಲ ತಿರುಪತಿ ದೇವಸ್ಥಾನಂ ಹಿಂದೂ ಧರ್ಮದ ಮಂಡಳಿಯಾಗಿದ್ದರೆ, ವಕ್ಫ್ ಮಂಡಳಿ ಮುಸ್ಲಿಂ ಧರ್ಮದ ಮಂಡಳಿಯಾಗಿದೆ. ಇಲ್ಲಿ ಸಮಾನತೆ ಇರಬೇಕು. ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟಿಗಳು ಮುಸ್ಲಿಮರಾಗಲು ಸಾಧ್ಯವಿಲ್ಲವೆಂದ ಮೇಲೆ, ವಕ್ಫ್ ಮಂಡಳಿಗೆ ಮುಸ್ಲಿಮೇತರರೇಕೆ ಸದಸ್ಯರಾಗಬೇಕು?” ಎಂದೂ ಅವರು ಪ್ರಶ್ನಿಸಿದ್ದಾರೆ.