ಅಸ್ಸಾಂ:ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾವ ಬರಾಕ್ ಕಣಿವೆಯಲ್ಲಿ ಪ್ರತಿಭಟನೆ, 300ಕ್ಕೂ ಅಧಿಕ ಜನರ ಬಂಧನ

Update: 2023-06-27 16:56 GMT

ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ಚುನಾವಣಾ ಆಯೋಗದ ಪ್ರಸ್ತಾವದ ವಿರುದ್ಧ ರಾಜಕೀಯ ಪಕ್ಷಗಳು ಸೋಮವಾರ ಕರೆ ನೀಡಿದ್ದ 12 ಗಂಟೆಗಳ ಬಂದ್ ಸಂದರ್ಭದಲ್ಲಿ ಬರಾಕ್ ಕಣಿವೆಯಲ್ಲಿ 300ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಬರಾಕ್ ಡೆಮಾಕ್ರಟಿಕ್ ಫ್ರಂಟ್, ಟಿಎಂಸಿ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಬಂದ್ಗೆ ಕರೆ ನೀಡಿದ್ದು, ಬರಾಕ್ ಕಣಿವೆಯ ಕಾಚಾರ್, ಕರೀಂಗಂಜ್ ಮತ್ತು ಹೈಲಕಂಡಿ ಜಿಲ್ಲೆಗಳಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.

ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಸ್ತಾಪವನ್ನು ಆಕ್ಷೇಪಿಸಿರುವ ಅಸ್ಸಾಮಿನಲ್ಲಿಯ ಪ್ರತಿಪಕ್ಷಗಳು,ಇದು ಆಡಳಿತಾರೂಢ ಬಿಜೆಪಿಯ ಬಹುಸಂಖ್ಯಾಕ ಅಜೆಂಡಾವನ್ನು ಉತ್ತೇಜಿಸುತ್ತದೆ ಎಂದು ಹೇಳಿವೆ.

ಚುನಾವಣಾ ಆಯೋಗವು ಜೂ.20ರಂದು ಬಿಡುಗಡೆಗೊಳಿಸಿರುವ ಕರಡಿನಲ್ಲಿ, ಮುಸ್ಲಿಮರು ಬಹುಸಂಖ್ಯಾಕರಾಗಿರುವ ಹಲವಾರು ಕ್ಷೇತ್ರಗಳನ್ನು ರದ್ದುಗೊಳಿಸುವುದನ್ನು ಅಥವಾ ಅವುಗಳನ್ನು ಹೊಸದಾಗಿ ಸೃಷ್ಟಿಸಲಾದ ಕ್ಷೇತ್ರಗಳಲ್ಲಿ ವಿಲೀನಗೊಳಿಸುವುದನ್ನು ಪ್ರಸ್ತಾಪಿಸಿದೆ. ಹೆಚ್ಚಿನ ಹೊಸ ಕ್ಷೇತ್ರಗಳು ಗಣನೀಯ ಹಿಂದೂ ಜನಸಂಖ್ಯೆಯನ್ನು ಹೊಂದಿವೆ.

ಮುಸ್ಲಿಮ್ ಬಹುಸಂಖ್ಯಾತ ಜಿಲ್ಲೆಗಳಾದ ಕರೀಂಗಂಜ್ ಮತ್ತು ಹೈಲಕಂಡಿಯಲ್ಲಿ ತಲಾ ಒಂದು ಕ್ಷೇತ್ರವನ್ನು ಕಡಿಮೆ ಮಾಡುವ ಮೂಲಕ ಬರಾಕ್ ಕಣಿವೆಯಲ್ಲಿನ ಕ್ಷೇತ್ರಗಳ ಸಂಖ್ಯೆಯನ್ನು 15ರಿಂದ 13ಕ್ಕೆ ಇಳಿಸಲು ಕರಡಿನಲ್ಲಿ ಶಿಫಾರಸು ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News