ಅದಾನಿ-ಹಿಂಡೆನ್‌ಬರ್ಗ್ ವಿವಾದ | ಅ.24ರಂದು ತನ್ನೆದುರು ಹಾಜರಾಗಲು ಸೆಬಿ ಮುಖ್ಯಸ್ಥೆಗೆ ಪಿಎಸಿ ಸಮನ್ಸ್

Update: 2024-10-05 14:58 GMT

ಮಾಧವಿ ಪುರಿ ಬುಚ್ , ಗೌತಮ್ ಅದಾನಿ | PTI

ಹೊಸದಿಲ್ಲಿ : ಭಾರತದ ಪ್ರಮುಖ ನಿಯಂತ್ರಕ ಸಂಸ್ಥೆಗಳ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಸಜ್ಜಾಗಿರುವ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ)ಯು ಸೆಬಿ ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಅಧಿಕಾರಿಗಳಿಗೆ ಅ.24ರಂದು ತನ್ನ ಮುಂದೆ ಹಾಜರಾಗಿ ಹೇಳಿಕೆಗಳನ್ನು ದಾಖಲಿಸುವಂತೆ ಸೂಚಿಸಿದೆ.

ಅ.24ರಂದು ತನ್ನ ಮುಂದೆ ಹಾಜರಾಗುವಂತೆ ಪಿಎಸಿ ಶುಕ್ರವಾರ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳಿಗೆ ಸಮನ್ಸ್ ಹೊರಡಿಸಿದೆ.

ಅಲ್ಲದೆ ಜಿಎಸ್‌ಟಿ ಸಂಗ್ರಹಗಳು ಮತ್ತು ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ ಸೇರಿದಂತೆ ಕಾರ್ಪೊರೇಟ್‌ಗಳಿಗೆ ಇತ್ತೀಚಿಗೆ ಹೊರಡಿಸಿದ್ದ ನೋಟಿಸ್‌ಗಳ ಕುರಿತು ಚರ್ಚಿಸಲು ತನ್ನ ಮುಂದೆ ಹಾಜರಾಗುವಂತೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಸೂಚಿಸಿದೆ.

ಅ.24ರಂದು ಉಪಸ್ಥಿತರಿರುವಂತೆ ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ದೂರಸಂಪರ್ಕ ಸಚಿವಾಲಯದ ಪ್ರತಿನಿಧಿಗಳಿಗೂ ನಿರ್ದೇಶನ ನೀಡಲಾಗಿದೆ. ಸಂಸ್ಥೆಗಳ ಮುಖ್ಯಸ್ಥರು ಇಂತಹ ಸಭೆಗಳಿಗೆ ಹಾಜರಾಗುವುದು ವಾಡಿಕೆಯಾಗಿದೆಯಾದರೂ ಹಿರಿಯ ಅಧಿಕಾರಿಗಳು ಮಾಧವಿ ಪುರಿ ಬುಚ್ ಮತ್ತು ಟ್ರಾಯ್ ಅಧ್ಯಕ್ಷ ಅನಿಲಕುಮಾರ ಲಾಹೋಟಿ ಅವರನ್ನು ಪ್ರತಿನಿಧಿಸಲಿದ್ದಾರೆ ಎಂದು ಪಿಎಸಿ ಸದಸ್ಯರು ಸುಳಿವು ನೀಡಿದ್ದಾರೆ.

ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರೀಸರ್ಚ್ ಮಾಡಿರುವ ಗಂಭೀರ ಆರೋಪಗಳ ಬಳಿಕ ಬುಚ್ ವಿವಾದದ ಸುಳಿಯಲ್ಲಿ ಸಿಲುಕಿರುವಾಗಲೇ ಈ ಪರಿಶೀಲನೆ ನಡೆಯುತ್ತಿದೆ.

ಅದಾನಿ ಗ್ರೂಪ್ ತನ್ನ ಶೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಲು ಬಳಸಿದ್ದ ಸಾಗರೋತ್ತರ ನಿಧಿಗಳಲ್ಲಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಹೂಡಿಕೆಗಳನ್ನು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ಆರೋಪಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News