ಗುಜರಾತ್ | ಸ್ನೇಹಿತನ ಎದುರೇ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

Update: 2024-10-05 14:52 GMT

ಸಾಂದರ್ಭಿಕ ಚಿತ್ರ

ವಡೋದರ : ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅತ್ಯಾಚಾರ ನಡೆಸಿರುವ ಘಟನೆ ಗುಜರಾತ್ ನ ವಡೋದರ ನಗರದ ಹೊರವಲಯದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಬಾಲಕಿಯೊಂದಿಗೆ ತೆರಳಿದ್ದ ಆಕೆಯ ಸ್ನೇಹಿತನನ್ನು ಮತ್ತೊಬ್ಬ ವ್ಯಕ್ತಿ ಬಲವಂತವಾಗಿ ಹಿಡಿದುಕೊಂಡಿದ್ದ ಎಂದು ಹೇಳಲಾಗಿದೆ.

ಈ ಘಟನೆಯು ನವರಾತ್ರಿ ರಾತ್ರಿಯಂದು ನಗರದಾದ್ಯಂತ ನಡೆಯುತ್ತಿರುವ ಗಾರ್ಬಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಕಷ್ಟು ಜನ ಹರಿದು ಬರುತ್ತಿರುವ ವೇಳೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 11 ಗಂಟೆ ಸಮಯದಲ್ಲಿ ನಾನು ನನ್ನ ಬಾಲ್ಯದ ಸ್ನೇಹಿತನನ್ನು ಭೇಟಿ ಮಾಡಲು ನಗರದ ಲಕ್ಷ್ಮಿಪುರ ಪ್ರದೇಶಕ್ಕೆ ತೆರಳಿದ್ದೆ ಎಂದು ಸಂತ್ರಸ್ತ ಬಾಲಕಿಯು ತಿಳಿಸಿದ್ದಾಳೆ ಎಂದು ವಡೋದರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ತಿಳಿಸಿದ್ದಾರೆ.

“ಅವರು ಭಯಾಲಿ ಪ್ರದೇಶದಲ್ಲಿ ಸ್ಕೂಟಿಯ ಮೇಲೆ ಮಧ್ಯರಾತ್ರಿ ಮರಳಿ ಬರುತ್ತಿರುವಾಗ, ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿರುವ ಐವರು ಅವರನ್ನು ನಿರ್ಜನ ರಸ್ತೆಯಲ್ಲಿ ಅಡ್ಡಗಟ್ಟಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಕೆಲ ಹೊತ್ತಿನ ವಾಗ್ವಾದದ ನಂತರ, ಐವರ ಪೈಕಿ ಇಬ್ಬರು ವಾಪಸ್ಸು ತೆರಳಿದರೆ, ಇನ್ನೂ ಮೂವರು ಅಲ್ಲಿಯೇ ಉಳಿದಿದ್ದಾರೆ. ಈ ಮೂವರ ಪೈಕಿ ಇಬ್ಬರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದರೆ, ಮೂರನೆಯ ವ್ಯಕ್ತಿ ಆಕೆಯ ಸ್ನೇಹಿತನನ್ನು ಹಿಡಿದುಕೊಂಡಿದ್ದಾನೆ” ಎಂದು ಅವರು ತಿಳಿಸಿದ್ದಾರೆ.

“ಘಟನಾ ಸ್ಥಳದಿಂದ ದುಷ್ಕರ್ಮಿಗಳು ತೆರಳಿದ ಬೆನ್ನಿಗೇ ಅಪ್ರಾಪ್ತರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಘಟನಾ ಸ್ಥಳವನ್ನು ತಮ್ಮ ವಶಕ್ಕೆ ಪಡೆದುಕೊಂಡು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಾರೆ. ತಾಂತ್ರಿಕ ನಿಗಾವಣೆ ಹಾಗೂ ಇನ್ನಿತರ ಸಾಧನಗಳ ಮೂಲಕ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ತನಿಖಾ ತಂಡಗಳನ್ನು ರಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ನವರಾತ್ರಿ ಹಬ್ಬದ ಸಂಭ್ರಮಾಚರಣೆಯ ಕಾಲಾವಧಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಗುಜರಾತ್ ಸರಕಾರ ಈ ಬಾರಿ ತೆಗೆದು ಹಾಕಿದೆ.

ಇಂತಹುದೇ ಘಟನೆಯೊಂದರಲ್ಲಿ, 21 ವರ್ಷದ ಯುವತಿಯ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಮಹಾರಾಷ್ಟ್ರದ ಪುಣೆಯ ಹೊರವಲಯದಲ್ಲಿ ಅತ್ಯಾಚಾರ ನಡೆಸಿದ್ದ ಘಟನೆ ಗುರುವಾರ ರಾತ್ರಿ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News