ಕಾಂಗ್ರೆಸ್ ನಗರ ನಕ್ಸಲೀಯರ ತಂಡದಿಂದ ನಡೆಯುತ್ತಿದೆ : ಪ್ರಧಾನಿ ಮೋದಿ

Update: 2024-10-05 15:08 GMT

 ಪ್ರಧಾನಿ ನರೇಂದ್ರ ಮೋದಿ | PC : PTI 

ವಾಶಿಮ್(ಮಹಾರಾಷ್ಟ್ರ) : ಕಾಂಗ್ರೆಸ್ ‘ನಗರ ನಕ್ಸಲೀಯರ ತಂಡ’ದಿಂದ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆರೋಪಿಸಿದ್ದಾರೆ.

ಕಾಂಗ್ರೆಸ್‌ನ ‘ಅಪಾಯಕಾರಿ ಕಾರ್ಯಸೂಚಿ’ಯನ್ನು ಸೋಲಿಸಲು ಸಂಘಟಿತರಾಗುವಂತೆ ಅವರು ಜನತೆಯಲ್ಲಿ ಮನವಿ ಮಾಡಿದರು. ಕಾಂಗ್ರೆಸ್ ಬಡ ಜನರನ್ನು ಲೂಟಿಗೈಯುತ್ತಿದೆ ಹಾಗೂ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಅವರ ಪರಿಸ್ಥಿತಿಯನ್ನು ಸುಧಾರಿಸಲು ಬಯಸುತ್ತಿಲ್ಲ ಎಂದು ಕೂಡ ಅವರು ಆರೋಪಿಸಿದರು.

‘‘ನಾವೆಲ್ಲರೂ ಸಂಘಟಿತರಾದರೆ, ದೇಶವನ್ನು ವಿಭಜಿಸುವ ಅವರ ಕಾರ್ಯಸೂಚಿ ವಿಫಲವಾಗುತ್ತದೆ ಎಂಬುದು ಅವರ (ಕಾಂಗ್ರೆಸ್) ಭಾವನೆ’’ ಎಂದು ಅವರು ಮಹಾರಾಷ್ಟ್ರದ ವಾಶಿಮ್‌ನಲ್ಲಿ ವಿವಿಧ ಯೋಜನೆಗಳನ್ನು ಲೋಕೋರ್ಪಣೆಗೊಳಿಸಿದ ಬಳಿಕ ನಡೆದ ರ‍್ಯಾಲಿಯಲ್ಲಿ ಹೇಳಿದರು.

‘‘ಬಡವರನ್ನು ಲೂಟಿ ಮಾಡುವುದು ಹೇಗೆ ಹಾಗೂ ಸ್ವಾರ್ಥ್ಯ ರಾಜಕೀಯಕ್ಕಾಗಿ ಅವರನ್ನು ಬಡವರನ್ನಾಗಿಯೇ ಉಳಿಸಿಕೊಳ್ಳುವುದು ಹೇಗೆ ಎಂದು ಮಾತ್ರ ಕಾಂಗ್ರೆಸ್‌ಗೆ ತಿಳಿದಿದೆ. ಜನರನ್ನು ವಿಭಜಿಸುವುದು ಹೇಗೆ ಎಂದು ಮಾತ್ರ ಅದಕ್ಕೆ ತಿಳಿದಿದೆ. ನಾವು ಎಚ್ಚರವಾಗಬೇಕು ಹಾಗೂ ಸಂಘಟಿತರಾಗಬೇಕು. ಕಾಂಗ್ರೆಸ್ ನಗರ ನಕ್ಸಲೀಯರ ತಂಡದಿಂದ ನಡೆಯುತ್ತಿದೆ’’ ಎಂದು ಅವರು ಆರೋಪಿಸಿದರು.

‘‘ಬ್ರಿಟೀಷ್ ಆಡಳಿತದಂತೆ ಕಾಂಗ್ರೆಸ್ ಕುಟುಂಬ ಕೂಡ ದಲಿತರು, ಹಿಂದುಳಿದ ವರ್ಗದವರು ಹಾಗೂ ಬುಡಕಟ್ಟು ಜನರನ್ನು ತಮ್ಮ ಸಮಾನರಾಗಿ ಪರಿಗಣಿಸುತ್ತಿಲ್ಲ. ಭಾರತವನ್ನು ಏಕೈಕ ಕುಟುಂಬ ಆಡಳಿತ ನಡೆಸಬೇಕು ಎಂಬುದು ಅವರ ಭಾವನೆ. ಆದುದರಿಂದಲೇ ಅವರಲ್ಲಿ ಬಂಜಾರಾ ಸಮುದಾಯದ ಬಗ್ಗೆ ಯಾವಾಗಲೂ ಅವಹೇಳನಕಾರಿ ಮನೋಭಾವ ಕಂಡು ಬರುತ್ತಿದೆ’’ ಎಂದು ಅವರು ಹೇಳಿದರು.

‘‘ಬಂಜಾರಾ ಸಮುದಾಯದ ಸಂತರು ಸಂಸ್ಕೃತಿ ಹಾಗೂ ಆಧ್ಯಾತ್ಮವಾದಕ್ಕೆ ಪ್ರೇರಣೆ ನೀಡಿದ್ದಾರೆ. ಈ ಸಮುದಾಯಕ್ಕೆ ಬ್ರಿಟೀಷರು ಕಿರುಕುಳ ನೀಡಿದರು. ಆದರೆ, ಅವರು ದೇಶ ತ್ಯಜಿಸಿದಾಗ, ಉತ್ತರಾಧಿಕಾರಿಯಾದ ಕಾಂಗ್ರೆಸ್ ಈ ನಿಲುವನ್ನು ಮುಂದುವರಿಸಿತು. ಈ ಸಮುದಾಯ ಮುಖ್ಯವಾಹಿನಿಗೆ ಬರದಂತೆ ತಡೆಯಿತು’’ ಎಂದು ಮೋದಿ ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾಶಿಮ್‌ನಲ್ಲಿ ಕೃಷಿ ಹಾಗೂ ಪಶುಸಂಗೋಪನೆ ಕ್ಷೇತ್ರಕ್ಕೆ ಸಂಬಂಧಿಸಿದ 23,000 ಕೋ.ರೂ. ವೆಚ್ಚದ ಯೋಜನೆಗಳನ್ನು ಶನಿವಾರ ಲೋಕಾರ್ಪಣೆಗೈದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News