ಎಲ್ಲಾ ಖಾಸಗಿ ಆಸ್ತಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Update: 2024-11-05 06:44 GMT

ಹೊಸದಿಲ್ಲಿ: ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರವು ಆರ್ಟಿಕಲ್ 39 (ಬಿ) ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಸಂವಿಧಾನದ 39(ಬಿ) ವಿಧಿಯ ಅಡಿಯಲ್ಲಿ ನಾಗರಿಕರ ಖಾಸಗಿ ಒಡೆತನದ ಪ್ರತಿಯೊಂದು ಆಸ್ತಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಸಂವಿಧಾನ ಪೀಠ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಂವಿಧಾನಿಕ ಪೀಠವು 8-1 ಬಹುಮತದೊಂದಿಗೆ ಈ ಬಗ್ಗೆ ತೀರ್ಪು ನೀಡಿದೆ.

ಸಂವಿಧಾನದ 31C  ಮತ್ತು 39 (ಬಿ) ಗೆ ಸಂಬಂಧಿಸಿದೆ. ಸರ್ಕಾರವು ಖಾಸಗಿ ಒಡೆತನದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದೇ ಮತ್ತು ಮರುಹಂಚಿಕೆ ಮಾಡಬಹುದೇ ಎಂಬ ಬಗ್ಗೆ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿ ಈ ತೀರ್ಪನ್ನು ನೀಡಲಾಗಿದೆ. ರಾಜ್ಯ ನೀತಿಯ ಡೈರೆಕ್ಟಿವ್ ಪ್ರಿನ್ಸಿಪಲ್ಸ್ (ಡಿಪಿಎಸ್ಪಿ) ಭಾಗವಾಗಿರುವ ಸಂವಿಧಾನದ 39 (ಬಿ) ವಿಧಿಯ ಅಡಿಯಲ್ಲಿ ಖಾಸಗಿ ಆಸ್ತಿಗಳನ್ನು "ಸಮುದಾಯದ ವಸ್ತು ಸಂಪನ್ಮೂಲಗಳು" ಎಂದು ಪರಿಗಣಿಸಬಹುದೇ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಈ ಕುರಿತು 1992ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. 2002ರಲ್ಲಿ 9 ನ್ಯಾಯಾಧೀಶರ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿತ್ತು. ಎರಡು ದಶಕಗಳಿಗೂ ಹೆಚ್ಚು ಕಾಲ ಬಾಕಿಯಾಗಿದ್ದ ಪ್ರಕರಣವನ್ನು 2024ರಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News