ಕೆನಡಾ ವಿವಾದ | ರಾಜತಾಂತ್ರಿಕರನ್ನು ಬೆದರಿಸಲು ಹೇಡಿ ಪ್ರಯತ್ನಗಳು : ಪ್ರಧಾನಿ ಮೋದಿ

Update: 2024-11-04 16:57 GMT

ನರೇಂದ್ರ ಮೋದಿ | PC : PTI 

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಸಂಜೆ ಕೆನಡಾದಲ್ಲಿನ ಹಿಂದು ದೇವಸ್ಥಾನದ ಮೇಲಿನ ಉದ್ದೇಶಪೂರ್ವಕ ದಾಳಿಯನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ. ಕಳೆದ ವಾರ ಭಾರತೀಯ ರಾಯಭಾರ ಕಚೇರಿಯು ಸಮಾಲೋಚನಾ ಶಿಬಿರವನ್ನು ಹಮ್ಮಿಕೊಂಡಿದ್ದ ಕೆನಡಾದ ಒಂಟಾರಿಯೋದ ಬ್ರಾಂಪ್ಟನ್ನ ಹಿಂದು ದೇವಸ್ಥಾನದ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದು, ಪ್ರವೇಶದ್ವಾರಗಳನ್ನು ಭೇದಿಸಿ ಒಳನುಗ್ಗಿದ್ದರು.

ಇವು ಕೆನಡಾದಲ್ಲಿನ ಭಾರತೀಯ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ಎಂದು ಟೀಕಿಸಿರುವ ಮೋದಿ,‘ಇಂತಹ ಹಿಂಸಾಚಾರಗಳು ಭಾರತದ ದೃಢಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾ ಸರಕಾರವು ನ್ಯಾಯವನ್ನು ಖಚಿತಪಡಿಸುತ್ತದೆ ಮತ್ತು ಕಾನೂನಿನ ಆಡಳಿತವನ್ನು ಎತ್ತಿ ಹಿಡಿಯುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ’ ಎಂದು ಎಕ್ಸ್ನಲ್ಲಿಯ ಪೋಸ್ಟ್ನಲ್ಲಿ ಹೇಳಿದ್ದಾರೆ.

►ಭಾರತೀಯರ ಸುರಕ್ಷತೆ ಬಗ್ಗೆ ತೀವ್ರ ಕಳವಳ

ಬ್ರಾಂಪ್ಟನ್ ನಲ್ಲಿಯ ಹಿಂದು ದೇವಸ್ಥಾನದ ಮೇಲಿನ ದಾಳಿಯನ್ನು ಪ್ರಸ್ತಾವಿಸಿ ಭಾರತವು, ಉಗ್ರಗಾಮಿಗಳು ಮತ್ತು ಪ್ರತ್ಯೇಕತಾವಾದಿಗಳಿಂದ ಹಿಂಸಾಚಾರದ ಕೃತ್ಯಗಳನ್ನು ತಾನು ಖಂಡಿಸುವುದಾಗಿ ಸೋಮವಾರ ಹೇಳಿದೆ. ಎಲ್ಲ ಧಾರ್ಮಿಕ ಸ್ಥಳಗಳಿಗೆ ಸಾಕಷ್ಟು ರಕ್ಷಣೆಯನ್ನು ಖಚಿತಪಡಿಸುವಂತೆ ಅದು ಕೆನಡಾಕ್ಕೆ ಕರೆ ನೀಡಿದೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು,‘ಇಂತಹ ಹಿಂಸಾಚಾರಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ನಾವು ನಿರೀಕ್ಷಿಸಿದ್ದೇವೆ. ಕೆನಡಾದಲ್ಲಿಯ ತನ್ನ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಭಾರತ ಸರಕಾರವು ತೀವ್ರವಾಗಿ ಕಳವಳಗೊಂಡಿದೆ,” ಎಂದು ಹೇಳಿದರು.

ದಾಳಿಯ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಭಾರತೀಯ ರಾಯಭಾರ ಕಚೇರಿಯು ಸಮಾಲೋಚನಾ ಶಿಬಿರವನ್ನು ನಡೆಸುತ್ತಿತ್ತು. ಇಂತಹ ದಾಳಿಗಳು ಭಾರತೀಯ ಮತ್ತು ಕೆನಡಾ ನಾಗರಿಕರಿಗೆ ಕಾನ್ಸುಲರ್ ಸೇವೆಗಳನ್ನು ಒದಗಿಸುವ ಪ್ರಯತ್ನಗಳಿಗೆ ಹಿನ್ನಡೆಯನ್ನುಂಟು ಮಾಡುವುದಿಲ್ಲ ಎಂದು ಜೈಸ್ವಾಲ್ ತಿಳಿಸಿದರು.

ಇದಕ್ಕೂ ಮುನ್ನ ಭಾರತೀಯ ರಾಯಭಾರ ಕಚೇರಿಯು, ಬಲವಾದ ಭದ್ರತಾ ಕ್ರಮಗಳಿಗೆ ಮುಂಚಿತವಾಗಿ ಕೋರಿಕೊಂಡಿದ್ದರೂ ಸಮಾಲೋಚನಾ ಶಿಬಿರಕ್ಕೆ ಹಿಂಸಾತ್ಮಕ ವ್ಯತ್ಯಯವನ್ನುಂಟು ಮಾಡಲಾಗಿದೆ. ಭಾರತೀಯ ಪ್ರಜೆಗಳು ಸೇರಿದಂತೆ ಶಿಬಿರದಲ್ಲಿ ಭಾಗಿಯಾಗಿದ್ದವರ ಸುರಕ್ಷತೆಯ ಬಗ್ಗೆ ತಾನು ಆತಂಕಗೊಂಡಿದ್ದೇನೆ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News