ನ. 25ರಿಂದ ಚಳಿಗಾಲದ ಅಧಿವೇಶನ | ವಕ್ಫ್ ಮಸೂದೆ ಮಂಡನೆ ಸಾಧ್ಯತೆ
ಹೊಸದಿಲ್ಲಿ : ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 25ರಿಂದ ಡಿಸೆಂಬರ್ 20ರ ವರೆಗೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಅಧಿವೇಶನದ ಸಂದರ್ಭ ಸರಕಾರ ವಿವಾದಾತ್ಮಕ ‘ಒಂದು ದೇಶ, ಒಂದು ಚುನಾವಣೆ’ ಹಾಗೂ ವಕ್ಫ್ ಮಸೂದೆಗಳನ್ನು ಮಂಡಿಸಲಿದೆ. ನವೆಂಬರ್ 23ರಂದು ಘೋಷಣೆಯಾಗಲಿರುವ ಜಾರ್ಖಂಡ್ ಹಾಗೂ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ ಫಲಿತಾಂಶ ಈ ಅಧಿವೇಶನದ ಮೇಲೆ ಮಹತ್ವದ ಪ್ರಭಾವ ಬೀರಲಿದೆ.
ಈ ಅಧಿವೇಶನದಲ್ಲಿ ಸರಕಾರ ಜಮ್ಮು ಹಾಗೂ ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವ ನಿರ್ಣಯವನ್ನು ಅಂಗೀಕರಿಸುವ ಸಾಧ್ಯತೆ ಇದೆ. ಇದು ಜಮ್ಮು ಹಾಗೂ ಕಾಶ್ಮೀರ ಜನತೆಯ ಸಾಂವಿಧಾನಿಕ ಹಕ್ಕನ್ನು ಮರು ಸ್ಥಾಪಿಸುವ ಹಾಗೂ ಅವರ ಅನನ್ಯ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಜಮ್ಮು ಹಾಗೂ ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ರಾಜ್ಯದ ಸ್ಥಾನಮಾನವನ್ನು ಶೀಘ್ರ ಮರು ಸ್ಥಾಪಿಸುವುದು ಸೇರಿದಂತೆ ಜಮ್ಮು ಹಾಗೂ ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು.
ಭಾರತದ ಸಂವಿಧಾನವನ್ನು ಅಂಗೀಕರಿಸಿದ 75ನೇ ವರ್ಷಾಚರಣೆಯ ದಿನವಾದ ನವೆಂಬರ್ 26ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಹಾಗೂ ರಾಜ್ಯ ಸಭೆಯ ಜಂಟಿ ಅಧಿವೇಶನ ಸಂವಿಧಾನ ರಚನಾ ಸಭೆ 1949 ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿದ ಸಂವಿಧಾನ ಸದನದ ಸೆಂಟ್ರಲ್ ಹಾಲ್ನಲ್ಲಿ ನಡೆಯುವ ಸಾಧ್ಯತೆ ಇದೆ. ಸಂವಿಧಾನ 1950 ಜನವರಿ 26ರಂದು ಜಾರಿಗೆ ಬಂತು. ಒಂದು ವೇಳೆ ಸರಕಾರ ಸಂಸತ್ತಿನಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಮಸೂದೆಯನ್ನು ಮಂಡಿಸಿದರೆ, ಅದು ಕಾಂಗ್ರೆಸ್ ಆಡಳಿತವಿರುವ ಹಲವು ರಾಜ್ಯಗಳಿಂದ ತೀವ್ರ ವಿರೋಧ ಎದುರಿಸುವ ಸಾಧ್ಯತೆ ಇದೆ.