ಚುನಾವಣಾ ರ‍್ಯಾಲಿಯಲ್ಲಿ ಸುಳ್ಳು ಹೇಳುವುದಕ್ಕಿಂತ, ವಾಸ್ತವ ಸಮಸ್ಯೆಗಳ ಕುರಿತು ಮಾತನಾಡಿ : ಪ್ರಧಾನಿ ನರೇಂದ್ರ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಸವಾಲು

Update: 2024-11-04 17:06 GMT

ಹೊಸದಿಲ್ಲಿ : ಚುನಾವಣಾ ರ‍್ಯಾಲಿಗಳಲ್ಲಿ ಪ್ರತಿಪಕ್ಷಗಳ ವಿರುದ್ಧ ಸುಳ್ಳು ಹೇಳುವುದರ ಬದಲು ವಾಸ್ತವ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಗೆ ಸೋಮವಾರ ಸವಾಲು ಹಾಕಿದ್ದಾರೆ.

ಬಿಜೆಪಿಯ ಜನ ವಿರೋಧಿ ನೀತಿಗಳು ಭಾರತದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸುಳ್ಳು ನಿರೂಪಣೆ ವಾಸ್ತವ ಕಲ್ಯಾಣಕ್ಕೆ ಪರ್ಯಾಯ ಆಗಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದ್ದಾರೆ.

ಸಾಮಾನ್ಯ ನಾಗರಿಕರ ಕೊನೆಯ ಪೈಸೆಯನ್ನು ಕೂಡ ಲೂಟಿ ಮಾಡುವ ಮೂಲಕ ನೀವು ಸೃಷ್ಟಿಸಿದ ಆರ್ಥಿಕ ಪ್ರಕ್ಷುಬ್ದತೆಯನ್ನು ಒಮ್ಮೆ ನೋಡಿ. ಕಡಿಮೆ ಉಪಭೋಗ, ಅಧಿಕ ಹಣದುಬ್ಬರ, ಹೆಚ್ಚುತ್ತಿರುವ ಅಸಮಾನತೆ, ತಗ್ಗಿದ ಹೂಡಿಕೆ, ವೇತನದ ನಿಶ್ಚಲತೆಯ ಅಡಿಯಲ್ಲಿ ತತ್ತರಿಸುತ್ತಿರುವ ಭಾರತದ ಆರ್ಥಿಕತೆಯ ಉತ್ಸಾಹವನ್ನು ಹಬ್ಬದ ಮೆರುಗು ಕೂಡ ಹೆಚ್ಚಿಸಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್’ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೈಗಾರಿಕೋದ್ಯಮಿಗಳು ಕೂಡ ಮಧ್ಯಮ ವರ್ಗದ ಅನುಪಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಯಾಕೆಂದರೆ ಮೋದಿ ಸರಕಾರ ತೀವ್ರ ಬೆಲೆ ಏರಿಕೆ ಮೂಲಕ ಬಡವರು ಹಾಗೂ ಮಧ್ಯಮವರ್ಗದವರಿಗೆ ಪ್ರಹಾರ ನೀಡಿದೆ. ಅಲ್ಲದೆ, ತಲೆಬುಡವಿಲ್ಲದ ತೆರಿಗೆ ಹೇರುವ ಮೂಲಕ ಅವರ ಉಳಿತಾಯವನ್ನು ನಾಶ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಎಫ್ಎಂಸಿಜಿ ವಲಯದಲ್ಲಿ ಬೇಡಿಕೆ ತೀವ್ರ ಕುಸಿತ ಕಂಡಿದೆ. ಈ ವರ್ಷ ಮಾರಾಟ ಬೆಳವಣಿಗೆ ಶೇ. 10.1ರಿಂದ ಶೇ. 2.8ಕ್ಕೆ ಇಳಿಕೆಯಾಗಿದೆ. ನಿಮ್ಮದೇ ಹಣಕಾಸು ಸಚಿವಾಲಯದ ತಿಂಗಳ ವರದಿ ಇದನ್ನು ಹೇಳಿದೆ ಎಂದು ಅವರು ತಿಳಿಸಿದ್ದಾರೆ.

ಲಾಭಾಂಶದಲ್ಲಿ ಇಳಿಕೆಯಾಗುತ್ತಿರುವುದಾಗಿ ಹಾಗೂ ಒಂದು ವೇಳೆ ಕಚ್ಚಾ ಸಾಮಗ್ರಿಗಳ ವೆಚ್ಚವನ್ನು ಕಂಪೆನಿಗಳಿಗೆ ಭರಿಸಲು ಸಾಧ್ಯವಾಗದೇ ಇದ್ದರೆ, ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಎಫ್ಎಂಸಿಜಿ ಕಂಪೆನಿಗಳು ವರದಿ ಮಾಡಿವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News