ದಕ್ಷಿಣ ಆಫ್ರಿಕಾದಲ್ಲಿ ಪ್ರಾಬಲ್ಯ ಮೆರೆಯಬಹುದುದೇ ಭಾರತದ ಟಿ20 ತಂಡ?
ಹೊಸದಿಲ್ಲಿ : ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಜೂನ್ 29ರಂದು ಬ್ರಿಡ್ಜ್ಟೌನ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್ನಲ್ಲಿ ಡೇವಿಡ್ ಮಿಲ್ಲರ್ ನೀಡಿದ ಕ್ಯಾಚನ್ನು ಪಡೆದು ಪಂದ್ಯವನ್ನು ಭಾರತದತ್ತ ವಾಲುವಂತೆ ಮಾಡುವ ತನಕವೂ ದಕ್ಷಿಣ ಆಫ್ರಿಕಾ ಗೆಲುವಿನ ಹಳಿಯಲ್ಲಿತ್ತು. ಅಂತಿಮವಾಗಿ ಭಾರತವು ಈ ಪಂದ್ಯವನ್ನು 7 ರನ್ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿತ್ತು.
ಇದೀಗ ಸೂರ್ಯಕುಮಾರ್ ನೇತೃತ್ವದ ಭಾರತದ ಟಿ20 ಕ್ರಿಕೆಟ್ ತಂಡವು ನವೆಂಬರ್ 8ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಟಿ20 ಸರಣಿಯನ್ನು ಆಡಲು ಸಜ್ಜಾಗಿದೆ.
ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ 9 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ 6 ಪಂದ್ಯಗಳಲ್ಲಿ ಜಯ, 3ರಲ್ಲಿ ಸೋಲುಂಡಿದೆ. ಟಿ20 ವಿಶ್ವಕಪ್ ಚಾಂಪಿಯನ್ನರು ದಕ್ಷಿಣ ಆಫ್ರಿಕಾ ನೆಲದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವತ್ತ ಚಿತ್ತ ಹರಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ವೈರತ್ವ ಸ್ಪರ್ಧಾತ್ಮಕತೆಯ ಜೊತೆಗೆ ರೋಚಕತೆಯಿಂದ ಕೂಡಿರುತ್ತದೆ. ಕೆಲವು ವರ್ಷಗಳಿಂದ ಉಭಯ ತಂಡಗಳು ದಕ್ಷಿಣ ಆಫ್ರಿಕಾ ಇಲ್ಲವೇ ಭಾರತದ ನೆಲದಲ್ಲಿ ನಿರಂತರವಾಗಿ ರೋಚಕ ಪಂದ್ಯಗಳನ್ನು ಆಡುತ್ತಾ ಬಂದಿವೆ.
ಭಾರತ ತಂಡವು 2006ರ ಡಿಸೆಂಬರ್ 1ರಂದು ಜೋಹಾನ್ಸ್ ಬರ್ಗ್ನಲ್ಲಿ ತನ್ನ ಮೊತ್ತ ಮೊದಲ ಟಿ20 ಪಂದ್ಯವನ್ನು ಆಡಿತ್ತು. ಒಂದು ಎಸೆತ ಬಾಕಿ ಇರುವಾಗಲೇ 6 ವಿಕೆಟ್ ಅಂತರದಿಂದ ಆ ಪಂದ್ಯವನ್ನು ಗೆದ್ದುಕೊಂಡಿತ್ತು. ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ತನ್ನ ಯಶಸ್ವಿ ವೃತ್ತಿಜೀವನದಲ್ಲಿ ಆಡಿರುವ ಏಕೈಕ ಟಿ20 ಪಂದ್ಯ ಇದಾಗಿತ್ತು.
2007ರ ಮೊದಲ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಮಣಿಸಿದ್ದ ಭಾರತ ತಂಡವು ಅಂತಿಮವಾಗಿ ಟಿ20 ಚಾಂಪಿಯನ್ ಶಿಪ್ನ್ನು ಗೆದ್ದುಕೊಂಡಿತ್ತು.
ಭಾರತ-ದಕ್ಷಿಣ ಆಫ್ರಿಕಾ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಪ್ರಮುಖ ಬ್ಯಾಟರ್ ಡೇವಿಡ್ ಮಿಲ್ಲರ್ ಗರಿಷ್ಠ ರನ್ ಸ್ಕೋರರ್ ಆಗಿದ್ದು, ಮಿಲ್ಲರ್ 21 ಪಂದ್ಯಗಳಲ್ಲಿ ಒಟ್ಟು 452 ರನ್ ಗಳಿಸಿದ್ದಾರೆ. ಔಟಾಗದೆ 106 ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ಮಿಲ್ಲರ್ ಮೊದಲ ಸ್ಥಾನದಲ್ಲಿದ್ದರೆ, ಭಾರತದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆ ನಂತರದ ಸ್ಥಾನದಲ್ಲಿದ್ದಾರೆ. ಈ ಇಬ್ಬರು ಟಿ20 ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಭಾರತದ ಭುವನೇಶ್ವರ ಕುಮಾರ್ ಗರಿಷ್ಠ ವಿಕೆಟ್ ಗಳನ್ನು ಪಡೆದಿದ್ದಾರೆ. ಮಧ್ಯಮ ವೇಗದ ಬೌಲರ್ ಕುಮಾರ್ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಕ್ರಿಕೆಟ್ ನಲ್ಲಿ 12 ಪಂದ್ಯಗಳಲ್ಲಿ 14 ವಿಕೆಟ್ಗಳನ್ನು ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಸೂರ್ಯಕುಮಾರ್ 2023ರ ಡಿಸೆಂಬರ್ನಲ್ಲಿ ಎರಡು ಟಿ20 ಪಂದ್ಯಗಳನ್ನಾಡಿದ್ದು, 56 ಹಾಗೂ 100 ರನ್ ಗಳಿಸಿದ್ದರು.
ಕಳೆದ ವರ್ಷ ಜೋಹಾನ್ಸ್ಬರ್ಗ್ನಲ್ಲಿ ನಡೆದಿದ್ದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ 4ನೇ ಶತಕವನ್ನು ಗಳಿಸಿದ್ದು, ಭಾರತ ತಂಡವು 106 ರನ್ ಅಂತರದಿಂದ ಜಯಶಾಲಿಯಾಗಿ 3 ಪಂದ್ಯಗಳ ಸರಣಿಯು 1-1ರಿಂದ ಡ್ರಾ ಗೊಳ್ಳುವಲ್ಲಿ ನೆರವಾಗಿದ್ದರು.
ದಕ್ಷಿಣ ಆಫ್ರಿಕಾ ತಂಡವು ಸ್ಪಿನ್ನರ್ ಗಳ ನೆರವಾಗುವ ಭಾರತದ ಪಿಚ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಭಾರತ ತಂಡವು ದಕ್ಷಿಣ ಆಫ್ರಿಕಾದ ವೇಗದ ಹಾಗೂ ಬೌನ್ಸಿ ಪಿಚ್ಗಳಲ್ಲಿ ತನ್ನ ಪ್ರತಿರೋಧ ತೋರುತ್ತಾ ಬಂದಿದೆ.