ಟಿಡಿಪಿಯ ಗೃಹಸಚಿವೆಯನ್ನೇ ತರಾಟೆಗೆತ್ತಿಕೊಂಡ ಆಂಧ್ರ ಡಿಸಿಎಂ ಪವನ್ ಕಲ್ಯಾಣ್!

Update: 2024-11-04 16:53 GMT

ಪವನ್ ಕಲ್ಯಾಣ್ | PC : ANI  

ಹೈದರಾಬಾದ್ : ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಅದಕ್ಷತೆಯನ್ನು ಆರೋಪಿಸಿ ಮಿತ್ರಪಕ್ಷ ಟಿಡಿಪಿಯ ಗೃಹಸಚಿವೆ ಅನಿತಾರನ್ನು ಬಹಿರಂಗವಾಗಿಯೇ ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಸುಧಾರಣೆಯಾಗದಿದ್ದರೆ ಗೃಹ ಖಾತೆಯನ್ನು ತಾನೇ ವಹಿಸಿಕೊಳ್ಳುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳಲ್ಲಿ ಏರಿಕೆಯಾಗಿರುವ ಸಮಯದಲ್ಲೇ ಪವನ್ ಕಲ್ಯಾಣ್ ರ ಎಚ್ಚರಿಕೆ ಹೊರಬಿದ್ದಿದೆ.

ನಿನ್ನೆ ಮೂರರ ಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್, ಆಂಧ್ರಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆ ಗಣನೀಯವಾಗಿ ಹದಗೆಟ್ಟಿದೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಬೇಕಿದೆ ಎಂದು ಹೇಳಿದರು.

ತನ್ನ ವಿಧಾನಸಭಾ ಕ್ಷೇತ್ರ ಪಿತಾಪುರಮ್ ನಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು, ‘ನಾನು ಗೃಹಸಚಿವೆ ಅನಿತಾರಿಗೂ ಹೇಳುತ್ತಿದ್ದೇನೆ. ನೀವು ಗೃಹಸಚಿವೆಯಾಗಿದ್ದೀರಿ, ನಾನು ಪಂಚಾಯತ್ರಾಜ್, ಅರಣ್ಯ ಮತ್ತು ಪರಿಸರ ಸಚಿವನಾಗಿದ್ದೇನೆ. ನಿಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿ, ಇಲ್ಲದಿದ್ದರೆ ನಾನು ಗೃಹ ಇಲಾಖೆಯನ್ನೂ ವಹಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ ’ ಎಂದು ಹೇಳಿದರು.

ಪವನ್ ಕಲ್ಯಾಣ್ ಬಹಿರಂಗವಾಗಿ ಟೀಕಿಸಿದ್ದು ಸರಕಾರದಲ್ಲಿ ಬಿರುಕಿನ ಊಹಾಪೋಹವನ್ನು ಹುಟ್ಟುಹಾಕಿದೆ. ಆದರೆ ಇನ್ನೋರ್ವ ಹಿರಿಯ ಸಚಿವ ನಾರಾಯಣ್ ಅವರು, ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ರಿಗೆ ತಪ್ಪುಗಳನ್ನು ಎತ್ತಿ ತೋರಿಸುವ ಮತ್ತು ಸಚಿವರನ್ನು ಸರಿದಾರಿಗೆ ತರುವ ಹಕ್ಕು ಇದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News