ಸ್ನೇಹಿತನ ರುಂಡ ಕತ್ತರಿಸಿ, ಫುಟ್‌ಬಾಲ್‌ನಂತೆ ಚೆಂಡಾಡಿದ್ದ ಸಹಪಾಠಿಗಳು!

Photo | indianexpress(ಸಾಂದರ್ಭಿಕ ಚಿತ್ರ)
ಪುಣೆ: ಅಪರಾಧ ಲೋಕದಲ್ಲಿ ಅದೆಷ್ಟೊ ಭೀಕರ ಹತ್ಯೆಗಳು ನಡೆಯುವುದು ಸರ್ವೇಸಾಮಾನ್ಯವಾಗಿದೆ. ಅದರಲ್ಲೂ ವೃತ್ತಿಪರ ಪಾತಕಿಗಳ ನಡುವಿನ ಗ್ಯಾಂಗ್ ವಾರ್ ಗಳಲ್ಲಿ ಭಯಾನಕ, ಬೀಭತ್ಸ ಹತ್ಯೆಗಳು ನಡೆದಿರುವ ಸಾವಿರಾರು ಉದಾಹರಣೆಗಳಿವೆ. ಆದರೆ, ಅಪ್ರಾಪ್ತ ಶಾಲಾ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕಾಗಿ ತಮ್ಮ ಸ್ನೇಹಿತನ ರುಂಡವನ್ನು ಕತ್ತರಿಸಿದ್ದಲ್ಲದೆ, ಅದನ್ನು ಫುಟ್ ಬಾಲ್ ನಂತೆ ಚೆಂಡಾಡಿದ್ದ ಅಪರಾಧ ಕೃತ್ಯವು 15 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ‘ಮುಂಡಿ ಹತ್ಯೆ ಪ್ರಕರಣ’ (ಮುಂಡಿ ಎಂದರೆ ಹಿಂದಿಯಲ್ಲಿ ರುಂಡ ಎಂದರ್ಥ) ಎಂದೇ ಕುಖ್ಯಾತವಾಗಿರುವ ಈ ಅಪರಾಧ ಕೃತ್ಯ ನಡೆದು ಇಂದಿಗೆ 15 ವರ್ಷಗಳೇ ಸಂದು ಹೋಗಿವೆ.
2010ರಲ್ಲಿ ನಡೆದಿದ್ದ ಈ ಅಪರಾಧ ಕೃತ್ಯದಲ್ಲಿ ತಮ್ಮ ಸ್ನೇಹಿತನ ರುಂಡವನ್ನು ಕತ್ತರಿಸಿದ್ದ ಸಹಪಾಠಿಗಳು, ಆ ರುಂಡವನ್ನು ಅಕ್ಷರಶಃ ಫುಟ್ ಬಾಲ್ ನಂತೆ ಚೆಂಡಾಡಿದ್ದರು. ನಂತರ, ಆ ರುಂಡವನ್ನು ನದಿಯೊಂದಕ್ಕೆ ಎಸೆದಿದ್ದರು. ಪೊಲೀಸರ ದಾಖಲೆಗಳ ಪ್ರಕಾರ, ಮೇ 6, 2010ರಂದು ಪುಣೆಯ ಸಂಗಮವಾದಿಯಲ್ಲಿರುವ ನಾಯಕ್ ದ್ವೀಪದ ನಿವಾಸಿಗಳ ಕಣ್ಣಿಗೆ ರುಂಡವಿಲ್ಲದ ದೇಹವೊಂದನ್ನು ಮರಕ್ಕೆ ಕಟ್ಟಿ ಹಾಕಿರುವುದು ಕಂಡು ಬಂದಿದೆ. ಕೂಡಲೇ ಅವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶಿರಚ್ಛೇದಗೊಂಡಿದ್ದ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದರು. ಈ ಸಂಬಂಧ ಯೆರವಾಡ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ತನಿಖೆಯ ವೇಳೆ, ಆ ಶಿರಚ್ಛೇದಗೊಂಡಿದ್ದ ಆ ಮೃತ ದೇಹವು ನ್ಯೂ ಮಂಗಳವಾರ್ ಪೇಟ್ ನ ನಿವಾಸಿ ಅಭಿಷೇಕ್ ಅಲಿಯಾಸ್ ಗೌರವ್ ಸುರೇಶ್ ಘೋರ್ಪಡೆ (15) ಎಂಬಾತನದ್ದು ಎಂಬುದು ಪತ್ತೆಯಾಗಿತ್ತು.
ತಮ್ಮ ಪುತ್ರ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಆಟೋರಿಕ್ಷಾ ಚಾಲಕರಾದ ಅಭಿಷೇಕ್ ನ ತಂದೆ, ಆ ಮೃತ ದೇಹ ತಮ್ಮ ಪುತ್ರನದ್ದೇ ಎಂದು ಗುರುತಿಸಿದ್ದರು. ಮೇ 5, 2010ರ ಸಂಜೆ 5 ಗಂಟೆಗೆ ತನ್ನ ಸ್ನೇಹಿತರೊಂದಿಗೆ ಮನೆಯಿಂದ ಹೊರಗೆ ತೆರಳಿದ್ದ ಅಭಿಷೇಕ್, ಮತ್ತೆ ಮನೆಗೆ ಮರಳಿರಲಿಲ್ಲ.
ಅಭಿಷೇಕ್ ನ ಸ್ನೇಹಿತರ ವಿಚಾರಣೆ ಹಾಗೂ ಬುಂದ್ ಗಾರ್ಡನ್ ಠಾಣೆಯ ಪೊಲೀಸ್ ಪೇದೆಗಳಾದ ನಾನಾ ಭಾಂಡಗೆ ಹಾಗೂ ರಾಹುಲ್ ಉತ್ತರ್ಕರ್ ನೀಡಿದ ಸುಳಿವನ್ನು ಆಧರಿಸಿ, ಅಭಿಷೇಕ್ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 18 ವರ್ಷದ ಬಾಲಕ ಹಾಗೂ ಇಬ್ಬರು ಅಪ್ರಾಪ್ತ ಬಾಲಕರನ್ನು ತನಿಖಾ ತಂಡವು ಬಂಧಿಸಿತ್ತು.
ಹತ್ಯೆಗೆ ಕಾರಣವೇನು?
ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತ ಬಾಲಕ ಹಾಗೂ ಮೂವರು ಆರೋಪಿಗಳು ಪುಣೆಯ ಸೋಮವಾರ ಪೇಟ್ ಪ್ರದೇಶದಲ್ಲಿರುವ ಶಾಲೆಯೊಂದರಲ್ಲಿ ಜೊತೆಯಾಗಿ ವ್ಯಾಸಂಗ ಮಾಡುತ್ತಿದ್ದರು. ಅವರೆಲ್ಲರಿಗೂ ಪರಸ್ಪರ ಪರಿಚಯವಿತ್ತು. ಈ ಪೈಕಿ ಇಬ್ಬರು ಆರೋಪಿಗಳು ಅಭಿಷೇಕ್ ನ ಸಹಪಾಠಿಗಳಾದರೆ, ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮತ್ತೋರ್ವ ಆರೋಪಿ, ಶಾಲೆಯನ್ನು ಅರ್ಧದಲ್ಲೇ ತೊರೆದಿದ್ದ ಎಂದು ಹೇಳಲಾಗಿದೆ.
ಎಪ್ರಿಲ್ 11, 2009ರಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಪುಣೆಯಲ್ಲಿರುವ ಸಮರ್ಥ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರೊಂದರಲ್ಲೂ ಈ ಮೂವರು ಆರೋಪಿಗಳನ್ನು ಹೆಸರಿಸಲಾಗಿತ್ತು. ಪೊಲೀಸರಿಗೆ ನೀಡಿದ ದೂರಿನಲ್ಲಿ ನಮ್ಮ ಹೆಸರುಗಳನ್ನು ಅಭಿಷೇಕ್ ನೀಡಿದ್ದಾನೆ ಎಂದು ಭಾವಿಸಿದ್ದ ಆರೋಪಿಗಳು, ಅಂದಿನಿಂದ ಆತನ ಮೇಲೆ ಹಗೆತನ ಸಾಧಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಮೇ 5ರಂದು ಅಭಿಷೇಕ್ ನ ಮೊಬೈಲ್ ಗೆ ಕರೆ ಮಾಡಿರುವ ಆರೋಪಿಗಳು ನಾಯಕ್ ದ್ವೀಪದ ನದಿಯ ಬದಿ ಹಮ್ಮಿಕೊಳ್ಳಲಾಗಿದ್ದ ಜನ್ಮದಿನಾಚರಣೆ ಔತಣ ಕೂಟಕ್ಕೆ ಆತನನ್ನು ಆಹ್ವಾನಿಸಿದ್ದರು. ಆದರೆ, ಜನ್ಮ ದಿನದ ಸಂಭ್ರಮಾಚರಣೆ ಮುಕ್ತಾಯಗೊಂಡ ನಂತರ, ಅಭಿಷೇಕ್ ನನ್ನು ಮರವೊಂದಕ್ಕೆ ಕಟ್ಟಿ ಹಾಕಿರುವ ಆರೋಪಿ ಬಾಲಕರು, ಆತನ ರುಂಡವನ್ನು ಮೊನಚಾದ ಆಯುಧದಿಂದ ಕತ್ತರಿಸಿದ್ದರು. ನಂತರ, ಆತನ ದೇಹದಿಂದ ಬೇರ್ಪಡೆಗೊಂಡ ರುಂಡ ಹಾಗೂ ಕೃತ್ಯಕ್ಕೆ ಬಳಸಿದ ಆಯುಧವನ್ನು ನದಿಗೆ ಎಸೆಯುವುದಕ್ಕೂ ಮುನ್ನ, ಅಕ್ಷರಶಃ ಫುಟ್ ಬಾಲ್ ನಂತೆ ಚೆಂಡಾಡಿದ್ದರು. ನಂತರ, ಅವರೆಲ್ಲ ಘಟನಾ ಸ್ಥಳದಿಂದ ಪರಾರಿಯಾಗಿದ್ದರು ಎಂಬ ಸಂಗತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಇದಾದ ನಂತರ, ಅಭಿಷೇಕ್ ನ ರುಂಡವನ್ನು ಎಸೆದಿದ್ದ ನಿಖರ ಸ್ಥಳವನ್ನು ಪತ್ತೆ ಹಚ್ಚಲು ಪೊಲೀಸರು 18 ವರ್ಷದ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಇದರ ಬೆನ್ನಿಗೇ, ಸೇನೆಯ ಬಾಂಬೆ ಸ್ಯಾಪರ್ಸ್ ಘಟಕವು ಪೊಲೀಸರು, ಖಾಸಗಿ ಈಜುಪಟುಗಳು ಹಾಗೂ ಪುಣೆ ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ನಾಪತ್ತೆಯಾಗಿದ್ದ ರುಂಡವನ್ನು ಪತ್ತೆ ಹಚ್ಚಲು ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.
ಈ ನಡುವೆ, ರುಂಡವಿಲ್ಲದ ಮೃತ ಬಾಲಕನ ದೇಹವನ್ನು ಆತನ ಕುಟುಂಬದ ಸದಸ್ಯರು ಸ್ವೀಕರಿಸಲು ನಿರಾಕರಿಸಿದ್ದರಿಂದ, ಆ ಮೃತ ದೇಹವನ್ನು ಮೇ 9, 2010ರವರೆಗೆ ಸಸೂನ್ ಆಸ್ಪತ್ರೆಯ ಶವಾಗರದಲ್ಲಿಡಲಾಗಿತ್ತು. ಕೊನೆಗೆ ಬಾಲಕನ ರುಂಡ ಪತ್ತೆಯಾದ ನಂತರ, ಆತನ ಕುಟುಂಬದ ಸದಸ್ಯರು ಆತನ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದರು.
ಬಾಲಕನ ಹತ್ಯೆಯಾದ ಸುಮಾರು ಮೂರು ವಾರಗಳ ನಂತರ, ನದಿಯ ಬಳಿ ಇರುವ ನಾಯಕ್ ದ್ವೀಪದ ನಿರ್ದಿಷ್ಟ ಸ್ಥಳದತ್ತ ನಾಯಿಗಳು ಬೊಗಳುತ್ತಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿಯೋರ್ವರು ಅಲ್ಲಿಗೆ ತೆರಳಿದಾಗ, ಶಿರಚ್ಛೇದಗೊಂಡ ರುಂಡವೊಂದು ಕಣ್ಣಿಗೆ ಬಿದ್ದಿತ್ತು. ತಕ್ಷಣವೇ ಅವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು, ವೈದ್ಯಕೀಯ ಪರೀಕ್ಷೆಗಳಿಗಾಗಿ ಆ ರುಂಡವನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದರು.
ವೈದ್ಯಕೀಯ ಪರೀಕ್ಷೆಗಳು ಆ ರುಂಡ ಅಭಿಷೇಕ್ ನದ್ದೇ ಎಂಬುದನ್ನು ದೃಢಪಡಿಸಿದ್ದವು ಎಂದು ಆ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಪೊಲೀಸ್ ಇನ್ಸ್ ಪೆಕ್ಟರ್ ದೀಪಕ್ ಸಾವಂತ್ ಹೇಳುತ್ತಾರೆ. ಸದ್ಯ ಈ ಪ್ರಕರಣದ ವಿಚಾರಣೆ ನ್ಯಾಯಾಲಯದ ಮುಂದೆ ಇನ್ನೂ ಬಾಕಿ ಇದೆ.
2023ರ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿದ್ದ ಓರ್ವ ಆರೋಪಿ
ಬಾಲಕನ ಹತ್ಯೆ ಪ್ರಕರಣದ ವಿಚಾರಣೆ ವಿಳಂಬಗೊಂಡಿದ್ದರಿಂದ, ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಾಲಾಪರಾಧ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ, ಈಗ 29 ವರ್ಷ ವಯಸ್ಸಿನವನಾದ ಸೂರ್ಯಕಾಂತ್ ಅಲಿಯಾಸ್ ಪಂಡಿತ್ ಅಲಿಯಾಸ್ ಪಿಂಟು ಅಲಿಯಾಸ್ ಭೌ ದಶರಥ್ ಕಾಂಬ್ಳೆ ಎಂಬ ಆರೋಪಿಯು, ಆಗಸ್ಟ್ 2023ರಲ್ಲಿ ನಡೆದಿದ್ದ ರೌಡಿ ಶೀಟರ್ ನಿತಿನ್ ಮಹಾಸ್ಕೆಯ ಭೀಕರ ಹತ್ಯೆಯ ಸಂಬಂಧ ಕಳೆದ ವಾರ ಬಂಧನಕ್ಕೀಡಾಗಿದ್ದ.
ಪುಣೆ ನಗರದ ತಡಿವಾಲ್ ರಸ್ತೆ ಕೊಳೆಗೇರಿಯ ನಿವಾಸಿಯಾದ ಕಾಂಬ್ಳೆಯು ಶಿವಾಜಿನಗರದ ಮಂಗಳ ಚಿತ್ರಮಂದಿರದ ದ್ವಾರದ ಬಳಿ ನಡೆದಿದ್ದ ಮಹಾಸ್ಕೆ ಹತ್ಯೆಯ ನಂತರ, ಸುಮಾರು 19 ತಿಂಗಳ ಕಾಲ ತಲೆ ಮರೆಸಿಕೊಂಡಿದ್ದ. ಆತ ಕುಖ್ಯಾತ ಪಂಡಿತ್ ಗ್ಯಾಂಗ್ ನ ನಾಯಕನೂ ಆಗಿದ್ದು, ತಡಿವಾಲ ರಸ್ತೆ ಹಾಗೂ ದತ್ತವಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಯಲ್ಯಾ ಗ್ಯಾಂಗ್ ನ ಪ್ರಮುಖ ಸದಸ್ಯನೂ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾಸ್ಕೆ ಹತ್ಯೆ ಪ್ರಕರಣದಲ್ಲಿ, ಕಾಂಬ್ಳೆ ಸೇರಿದಂತೆ ಇನ್ನಿತರ 20 ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾರ್ಚ್ 11ರಂದು ಕಾಂಬ್ಳೆಯನ್ನು ಬಂಧಿಸಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ್ದ ಉಪ ಪೊಲೀಸ್ ಆಯುಕ್ತ (ವಲಯ 1) ಸಂದೀಪ್ ಸಿಂಗ್ ಗಿಲ್, ಕಾಂಬ್ಳೆಯ ಹೆಸರು ಎರಡು ಹತ್ಯೆ ಪ್ರಕರಣಗಳು ಸೇರಿದಂತೆ ನಾಲ್ಕು ಗಂಭೀರ ಅಪರಾಧ ಕೃತ್ಯಗಳಲ್ಲಿ ಕೇಳಿ ಬಂದಿದೆ ಎಂದು ತಿಳಿಸಿದ್ದರು.
ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲೂ ಕಾಂಬ್ಳೆ ಮುಂಡಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಉಲ್ಲೇಖಿಸಲಾಗಿದೆ.
ಸೌಜನ್ಯ: indianexpress.com